ಬೆಂಗಳೂರು: ಬಿಡಿಎ ವ್ಯಾಪ್ತಿಯಲ್ಲಿ ಹೊಸ ಬಡಾವಣೆ ರಚಿಸುವ ಹಿನ್ನೆಲೆಯಲ್ಲಿ ಅಂತಹ ಪ್ರದೇಶಗಳಲ್ಲಿ ನಿರ್ಮಿಸಲಿರುವ ಮನೆಗಳಿಗೆ ವಿದ್ಯುತ್ ಸಂಪರ್ಕ ಸೇರಿ ಮೂಲಸೌಲಭ್ಯ ಒದಗಿಸದಂತೆ ಬೆಸ್ಕಾಂಗೆ ಪತ್ರ ಬರೆದಿರುವ ಪ್ರಾಧಿಕಾರದ ಆಯುಕ್ತರ ಆದೇಶವನ್ನು ಹಿಂಪಡೆಯುವಂತೆ ಕೋರಿ, ಪಿಆರ್‌ಆರ್ ರೈತ ಹಾಗೂ ನಿವೇಶನದಾರರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊರೆ ಹೋಗಿದೆ.
ಭೂಸ್ವಾಧೀನ ಆದೇಶ ಇಲ್ಲದೆ ಭವಿಷ್ಯದಲ್ಲಿ ಲೇಔಟ್ ನಿರ್ಮಿಸುವುದಾಗಿ ಹೇಳಿ ಅಲ್ಲಿರುವ ಕಂದಾಯ ಬಡಾವಣೆಗಳಲ್ಲಿ ನಿರ್ಮಾಣವಾಗುವ ಹೊಸ ಮನೆ ಅಥವಾ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡದಂತೆ ಇತ್ತೀಚಿಗೆ ಪ್ರಾಧಿಕಾರದ ಆಯುಕ್ತರು ಪತ್ರ ಬರೆದಿದ್ದರು. ಈ ನಿರ್ಧಾರದ ವಿರುದ್ಧ ಪೆರಿಫೆರಲ್ ರಿಂಗ್ ರಸ್ತೆಗೆ (ಪಿಆರ್‌ಆರ್) ಹೊಂದಿಕೊಂಡಿರುವ ಪ್ರದೇಶದಲ್ಲಿರುವ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸ್ವಂತ ಮನೆ ನಿರ್ಮಿಸಿಕೊಳ್ಳಲು ಯಾರ ಅಪ್ಪಣೆಯೂ ಬೇಕಿಲ್ಲ. ಹೀಗಿರುವಾಗ ಸರ್ಕಾರಿ ಸಂಸ್ಥೆಯಾದ ಬಿಡಿಎ ಜನರ ಜೀವಿಸುವ ಹಕ್ಕನ್ನು ಕಸಿಯುವ ಯತ್ನ ಮಾಡಿದ್ದು, ಜನವಿರೋಧಿಯಾಗಿರುವ ಈ ಆದೇಶವನ್ನು ವಾಪಸ್ ಪಡೆದುಕೊಳ್ಳುವಂತೆ ಸಿಎಂಗೆ ಪತ್ರ ಬರೆದಿರುವುದಾಗಿ ಸಂಘದ ಅಧ್ಯಕ್ಷ ಮಾವಳ್ಳಿ ಶ್ರೀನಿವಾಸ್ ತಿಳಿಸಿದ್ದಾರೆ.
ಬಿಡಿಎಗೆ ಹೊಸ ಬಡಾವಣೆಯನ್ನು ನಿರ್ಮಿಸಲು ಅವಕಾಶ ಇದೆ. ಆದರೆ, ಸರ್ಕಾರದ ಗಮನಕ್ಕೆ ತಾರದೆ ಅಧಿಕೃತ ಗೆಜೆಟ್ ಹೊರಡಿಸದೆಯೇ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸುವಂತಿಲ್ಲ. ಜತೆಗೆ ಭವಿಷ್ಯದಲ್ಲಿ ಲೇಔಟ್ ನಿರ್ಮಿಸುವುದಾಗಿ ಹೇಳಿ ಈಗಲೇ ಅಂತಹ ಪ್ರದೇಶದಲ್ಲಿ ಜನರಿಗೆ ಮನೆಗಳನ್ನು ಕಟ್ಟಿಕೊಳ್ಳಲು ನಿರ್ಬಂಧಿಸುವ ಸಲುವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬಾರದೆಂದು ಪತ್ರ ಬರೆದಿರುವ ಬಿಡಿಎ ಆಯುಕ್ತರು ಅಧಿಕಾರ ವ್ಯಾಪ್ತಿ ಮೀರಿದ ತೀರ್ಮಾನವನ್ನು ಕೈಗೊಂಡಿದ್ದಾರೆ. ಇಂತಹ ಕಾನೂನುಬಾಹಿರ ಆದೇಶದಿಂದ ಜನರಿಗೆ ತೊಂದರೆ ಆಗಲಿರುವ ಕಾರಣ ಬೆಸ್ಕಾಂಗೆ ಬರೆದಿರುವ ಪತ್ರವನ್ನು ವಾಪಸ್ ಪಡೆಯುವಂತೆ ಪ್ರಾಧಿಕಾರದ ಆಯುಕ್ತರಿಗೆ ನಿರ್ದೇಶನ ನೀಡುವಂತೆ ಸಂಘವು ಮುಖ್ಯಮಂತ್ರಿ ಅವರನ್ನು ವಿನಂತಿಸಿದ್ದಾರೆ.