ಜಿಲ್ಲೆ

ಕಾರ್‌ಪೂಲಿಂಗ್ ಅನುಮತಿ ನೀಡುವಂತೆ ಸಿಎಂಗೆ ಪತ್ರ ಬರೆದ ಸಂಸದ ತೇಜಸ್ವಿ ಸೂರ್ಯ: ವಾಹನ ಮಾಲೀಕರು ಮತ್ತು ಚಾಲಕರು ತೀವ್ರ ಅಸಮಾಧಾನ

ಮಂಜುನಾಥ.ಕೆ

ಬೆಂಗಳೂರು: ನಗರದಲ್ಲಿ ರೇಡ್ ಶೇರಿಂಗ್ ಮತ್ತು ಕಾರ್‌ಪೂಲಿಂಗ್ ಅನುಮತಿ ನೀಡುವಂತೆ ಕೋರಿ ಸಂಸದ ತೇಜಸ್ವೀ ಸೂರ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಬರೆದಿದ್ದು, ಇದರಿಂದ ಹಳದಿ ಬಣ್ಣದ(ಯಲ್ಲೋ ಬೋರ್ಡ್) ವಾಹನ ಮಾಲೀಕರು ಮತ್ತು ಚಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಕಾರ್‌ಪೂಲಿಂಗ್ ಅನ್ನು ನಿಷೇಧಿಸಲಾಗಿದೆ ಎಂದು ಸಾರಿಗೆ ಇಲಾಖೆ ಪ್ರಕಟಿಸಿದ್ದು, ಕಾರ್‌ಪೂಲಿಂಗ್ ಅಪ್ಲಿಕೇಶನ್ ಬಳಿಸಿ ಪ್ರಯಾಣ ಮಾಡದಂತೆ ಪ್ರಯಾಣಿಕರಿಗೆ ಸಲಹೆ ನೀಡಿದೆ. ಟ್ಯಾಕ್ಸಿ ಚಾಲಕರ ಸಂಘಗಳಿಂದ ಸರ್ಕಾರಕ್ಕೆ ದೂರು ಬಂದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಮಧ್ಯೆ ಸಂಸದ ತೇಜಸ್ವೀ ಸೂರ್ಯ ಅ.೧ ರಂದು ನಗರದಲ್ಲಿ ರೇಡ್ ಶೇರಿಂಗ್ ಮತ್ತು ಕಾರ್‌ಪೂಲಿಂಗ್ ಅನುಮತಿ ನೀಡುವಂತೆ ಸಿಎಂಗೆ ಪತ್ರ ಬರೆದಿದ್ದು, ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ನಗರದಲ್ಲಿ ಕಾರ್‌ಪೂಲಿಂಗ್ ಅನ್ನು ಕಾನೂನುಬಾಹಿರಗೊಳಿಸಲಾಗಿದ್ದು, ಇನ್ಮೇಲೆ ಯಾರಾದರೂ ಕಾರ್‌ಪೂಲಿಂಗ್ ಸೇವೆಗಳನ್ನು ನಿರ್ವಹಿಸುವುದು ಕಂಡುಬಂದಲ್ಲಿ ೫ ಸಾವಿರದಿಂದ ೧೦ ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ ಹಾಗೂ ೬ ತಿಂಗಳವರೆಗೆ ಆರ್‌ಸಿ (ವಾಹನ ನೋಂದಣಿ ಪ್ರಮಾಣಪತ್ರ) ನಿರ್ಬಂಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಹೇಳಿದೆ.
ಏನಿದು ಕಾರ್‌ಪೂಲಿಂಗ್?
ಬೆಂಗಳೂರು ಸೇರಿದಂತೆ ಭಾರತದ ಅನೇಕ ನಗರಗಳಲ್ಲಿ ಕಾರ್‌ಪೂಲಿಂಗ್ ಸೇವೆ ಲಭ್ಯವಿದೆ. ಒಬ್ಬ ವ್ಯಕ್ತಿ ಮಾತ್ರ ಒಂದು ಕಾರಿನಲ್ಲಿ ಹೋಗುವ ಬದಲು ಅದೇ ಮಾರ್ಗದಲ್ಲಿ ಹೋಗುವ ಇತರರನ್ನೂ ಕೂರಿಸಿಕೊಂಡು, ನಿರ್ದಿಷ್ಟ ಪ್ರಯಾಣದ ಮೊತ್ತ ಶೇರ್ ಮಾಡಿಕೊಂಡು ಪ್ರಯಾಣಿಸುವುದೇ ಕಾರ್‌ಪೂಲಿಂಗ್ ಆಗಿದೆ. ಇದು ಪೀಕ್ ಅವರ್‌ಗಳಲ್ಲಿ ರಸ್ತೆಗಳಲ್ಲಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಬೆಂಗಳೂರಿನಲ್ಲಿ ಅನೇಕರು, ವಿಶೇಷವಾಗಿ ಐಟಿ ಉದ್ಯೋಗಿಗಳು ಕಾರ್‌ಪೂಲಿಂಗ್ ಸೇವೆಯ ಮೊರೆ ಹೋಗಿದ್ದಾರೆ.
ನಿಷೇಧ ಮಾಡಲು ಕಾರಣವೇನು?
ವೈಟ್ ಬೋರ್ಡ್ ಇರುವ ಖಾಸಗಿ ವಾಹನಗಳನ್ನು ಲಾಭಕ್ಕಾಗಿ ಕಾರ್‌ಪೂಲಿಂಗ್‌ಗೆ ಬಳಸಿಕೊಳ್ಳಲಾಗುತ್ತಿದ್ದು, ಇದು ಇತರ ಯಲ್ಲೋ ಬೋರ್ಡ್ ಟ್ಯಾಕ್ಸಿ ಹಾಗೂ ಆಟೋ ಸೇವೆಗಳ ಮೇಲೆ ಪರಿಣಾಮ ಬೀರಿದೆ. ಇದು ನಮ್ಮ ದೈನಂದಿನ ಆದಾಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಟ್ಯಾಕ್ಸಿ ಸಂಘಗಳು ಹಾಗೂ ಆಟೋರಿಕ್ಷಾ ಚಾಲಕರ ಒಕ್ಕೂಟ ಸರ್ಕಾರಕ್ಕೆ ತಿಳಿಸಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ. ಇದರ ಜತೆಗೆ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವುದು ಆಟೋರಿಕ್ಷಾ ಚಾಲಕರ ಮತ್ತೊಂದು ಪ್ರಮುಖ ಬೇಡಿಕೆಯಾಗಿದ್ದು, ಇದರ ಬಗ್ಗೆ ಕಾನೂನು ಸಾಧ್ಯತೆಗಳನ್ನು ಪರಿಶೀಲಿಸಿದ ನಂತರ ಪರಿಗಣಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಕಾರ್‌ಪೂಲಿಂಗ್ ಯಾವೆಲ್ಲ ಆ್ಯಪ್‌ಗಳಿವೆ?
ಬ್ಲಾಬ್ಲಾ ಕಾರ್, ಕ್ವಿಕ್ ರೈಡ್, ಝೂಮ್, ರೇಡ್‌ಶೇರ್ ಸೇರಿ ಇತ್ಯಾದಿ ಆ್ಯಪ್‌ಗಳಿವೆ.