ಜಿಲ್ಲೆ

ಮರು ಪರಿಶೀಲನಾ ಪ್ರಕ್ರಿಯೆ ಸ್ಥಗಿತಕ್ಕೆ ಸಿಎಂಗೆ ಪತ್ರ

ಶಿರಸಿ: ಅಸಮರ್ಪಕ ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯವಾಸಿಗಳ ಮರು ಪರಿಶೀಲನಾ ವಿಚಾರಣೆಗೆ ರಾಜ್ಯಾದ್ಯಂತ ಕಾನೂನಾತ್ಮಕ ಆಕ್ಷೇಪ ಬಂದಿರುವ ಹಿನ್ನಲೆಯಲ್ಲಿ, ಮರು ಪರಿಶೀಲನಾ ಪ್ರಕ್ರಿಯೆ ಸ್ಥಗಿತಕ್ಕೆ ಮುಖ್ಯಮಂತ್ರಿಗೆ ಪತ್ರ ಬರೆಯುವೆ ಎಂದು ಸಚಿವ ಸತೀಶ ಜಾರಕಿಹೊಳಿ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರಿಗೆ ಭರವಸೆ ನೀಡಿದ್ದಾರೆ.

ಬೆಂಗಳೂರಿನ ಗೃಹ ಕಛೇರಿಯಲ್ಲಿ ಇತ್ತೀಚೆಗೆ ಭೇಟಿಯಾದ ರವೀಂದ್ರನಾಥ ನಾಯ್ಕ ಹಾಗೂ ತಂಡದೊಂದಿಗೆ ಮಾತನಾಡಿರುವ ಸತೀಶ ಜಾರಕಿಹೊಳಿ, ಮರು ಪರಿಶೀಲನಾ ಪ್ರಕ್ರಿಯೆಯಲ್ಲಿ ಕಾನೂನಾತ್ಮಕ ತೊಡಕುಗಳನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಪ್ರಕ್ರಿಯೆ ನಿಯಂತ್ರಿಸಲಾಗುವುದು. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ರಾಜ್ಯ ಅರಣ್ಯ ಭೂಮಿ ಹಕ್ಕು ಮೇಲ್ವಿಚಾರಣಾ ಸಮಿತಿಯ ಅಪೂರ್ಣ ಸಮಿತಿ ತೆಗೆದುಕೊಂಡ ನಿರ್ಣಯ ಕಾಯ್ದೆಗೆ ವಿರುದ್ಧವಾಗಿದೆ. ಮತ್ತು ಮೂರು ತಲೆಮಾರಿನ ವೈಯಕ್ತಿಕ ದಾಖಲೆಗೆ ಅರಣ್ಯ ಹಕ್ಕು ಸಮಿತಿಯು ನೋಟೀಸ್ ನೀಡುತ್ತಿರುವುದು ಕಾನೂನಿಗೆ ವ್ಯತಿರಿಕ್ತವಾದ ಕ್ರಮವಾಗಿದೆ ಎಂದಿದ್ದಾರೆ. ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ರಾಜ್ಯ ಸರ್ಕಾರವು ಅರಣ್ಯವಾಸಿಗಳ ಪರವಾಗಿದ್ದು, ಮಂಜೂರಿ ಪ್ರಕಿಯೆಯಲ್ಲಿ ಅರಣ್ಯವಾಸಿಗಳ ಪರವಾಗಿ ಸರ್ಕಾರವು ನಿಲುವು ವ್ಯಕ್ತಪಡಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.