ಜಿಲ್ಲೆ

ಬರಗಾಲ ಘೋಷಣೆಗೆ ಕೇಂದ್ರಕ್ಕೆ ಪತ್ರ

Davangere - Desk - Mahesh Babu E

ಚಿತ್ರದುರ್ಗ: ಸಕಾಲಕ್ಕೆ ಮಳೆ ಬಾರದೆ ರೈತರಿಗೆ ತೊಂದರೆಯಾಗಿದೆ. ಬರಗಾಲವೆಂದು ಘೋಷಣೆ ಮಾಡಲು ನಿಯಮಗಳಿಗೆ ತಿದ್ದುಪಡಿ ತರುವಂತೆ ಕೋರಿ ಸಿಎಂ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತದಲ್ಲಿ ಕಡಿಮೆ ಮಳೆಯಾಗುವ 16 ಜಿಲ್ಲೆಗಳ ಪೈಕಿ ಚಿತ್ರದುರ್ಗ, ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಮಳೆ ಆಗುವ ತಾಲೂಕು ಚಳ್ಳಕೆರೆ. 1871 ದೇವರ ಎತ್ತುಗಳ ಸಹಿತ ದನಕರುಗಳ ರಕ್ಷಣೆಗೆ ಗೋಶಾಲೆಗಳ ಅಗತ್ಯವಿದೆ. ಕುರುಡಿಹಳ್ಳಿ ಬಳಿಯ ‘ಪುಣ್ಯಕೋಟಿ’ ಗೋಶಾಲೆ ಸಾಮರ್ಥ್ಯ ಹೆಚ್ಚಿಸಬೇಕಿದೆ. ಬರ ನಿರ್ವಹಣೆಗೆ ಹಣದ ಕೊರತೆ ಇಲ್ಲ ಎಂದರು.

ಶಾಶ್ವತ ಯೋಜನೆ: ತುಂಗಾ ಹಿನ್ನೀರಿನಿಂದ ಕುಡಿವ ನೀರು ಪೂರೈಸುವ 2,280 ಕೋಟಿ ರೂ. ವೆಚ್ಚದ ಯೋಜನೆ ಕಾಮಗಾರಿ ಮುಕ್ತಾಯ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.

ವಾಣಿವಿಲಾಸ ಸಾಗರ ಜಲಾಶಯದಿಂದ ವೇದಾವತಿ ನದಿ ಮೂಲಕ 0.25 ಟಿಎಂಸಿ ಅಡಿ ನೀರು ಪಡೆದು ಕುಡಿವ ನೀರು ಅಂತರ್ಜಲ ವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ. ಐದು ಬ್ಯಾರೇಜ್‌ಗಳಲ್ಲಿ ಮೂರು ಪೂರ್ಣಗೊಂಡಿವೆ. ಇನ್ನು ಕೆಲವೆಡೆ ಬ್ಯಾರೇಜ್‌ಗಳನ್ನು ನಿರ್ಮಿಸುವ ಉದ್ದೇಶವಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಇದ್ದ ನೀರು ತುಂಬಿಸುವ ಕೆರೆಗಳ ಸಂಖ್ಯೆಯನ್ನು 9 ರಿಂದ 51ಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದರು.