ಜಿಲ್ಲೆ

ಮಿಸ್ ಮಾಡ್ದೆ ವೋಟ್ ಮಾಡಿ ಎಂದು ಪಾಲಕರು, ಸಂಬಂಧಿಕರಿಗೆ ಪತ್ರ: ಉಮ್ಮಡಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ವಿನೂತನ ಪ್ರಯತ್ನ…!

ಮಂಡ್ಯ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅರ್ಹ ಮತದಾರರಿಂದ ತಪ್ಪದೇ ಮತದಾನ ಮಾಡಿಸಬೇಕೆನ್ನುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈ ನಡುವೆ ತಾಲೂಕಿನ ಉಮ್ಮಡಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ವಿನೂತನ ಪ್ರಯತ್ನ ಮೆಚ್ಚುಗೆ ಜತೆಗೆ ಮತದಾರರ ಜವಾಬ್ದಾರಿಯನ್ನು ನೆನಪಿಸುವಂತೆ ಮಾಡಿದೆ.
ವಿಶೇಷತೆಗಳಿಂದಲೇ ಗಮನಸೆಳೆಯುತ್ತಿರುವ ಉಮ್ಮಡಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ಮತದಾನ ಕುರಿತು ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ. ಅಂದರೆ ಪಾಲಕರು, ದೂರದ ಸಂಬಂಧಿಕರಿಗೆ ಪತ್ರ ಬರೆಯುವ ಮೂಲಕ ಕಡ್ಡಾಯ ಮತದಾನ ಮಾಡುವಂತೆ ಸಲಹೆ ನೀಡುತ್ತಿದ್ದಾರೆ. ಇಂತಹದೊಂದು ವಿಶೇಷ ಕಾರ್ಯಕ್ರಮ ಗಮನಸೆಳೆಯುತ್ತಿದೆ.

ಉಮ್ಮಡಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಸಹಯೋಗದಲ್ಲಿ ವಿದ್ಯಾರ್ಥಿಗಳು ಅಭಿಯಾನ ನಡೆಸಿದ್ದಾರೆ. ಅದರಂತೆ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮವರಿಗೆ ಪತ್ರ ಬರೆದಿದ್ದಾರೆ. ಲೋಕಸಭಾ ಚುನಾವಣೆಗೆ ಮತದಾನ ಮಾಡುವ ದಿನ ಸಮೀಪಿಸುತ್ತಿದೆ. ಏ.26ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಅಂದು ನಿಮ್ಮ ಮತವನ್ನು ಉತ್ತಮ ಹಾಗೂ ದೇಶದ ಅಭಿವೃದ್ಧಿ ಮಾಡುವ ಅಭ್ಯರ್ಥಿಗೆ ಹಾಕಿ. ಜತೆಗೆ ನಿಮ್ಮ ಮನೆಯಲ್ಲಿರುವ 18 ವರ್ಷ ಮೇಲ್ಪಟ್ಟ ಎಲ್ಲರಿಂದಲೂ ಮತದಾನ ಮಾಡಿಸಿ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಕಡ್ಡಾಯವಾಗಿ ಮತದಾನ ಮಾಡಿ. ಈ ಪತ್ರ ತಲುಪಿದ ನಂತರ ನನಗೊಂದು ಪತ್ರ ಬರೆಯಿರಿ. ನಿಮ್ಮ ಪತ್ರದ ನಿರೀಕ್ಷೆಯಲ್ಲಿದ್ದೇನೆಂದು ಕಾಳಜಿ ತೋರಿದ್ದಾರೆ.
ಪ್ರಯತ್ನ ಚಿಕ್ಕದು ಎನಿಸಿದರೂ ವಿದ್ಯಾರ್ಥಿಗಳ ಜವಾಬ್ದಾರಿ ಮತದಾರರನ್ನು ಎಚ್ಚರಿಸುವ ಕೆಲಸ ಮಾಡಿದೆ. ಅರ್ಹತೆ ಹೊಂದಿದ್ದರೂ ನಿರ್ಲಕ್ಷೃ ಮಾಡುವವರಿಗೆ ವಿದ್ಯಾರ್ಥಿಗಳ ಪ್ರಯತ್ನ ಬುದ್ಧಿ ಹೇಳುವಂತಿದೆ. ಈ ನಿಟ್ಟಿನಲ್ಲಿ ಅರ್ಹರೆಲ್ಲರೂ ಮತದಾನ ಮಾಡಿದರೆ ಇಂತಹ ಅಭಿಯಾನಕ್ಕೆ ಯಶಸ್ಸು ಸಿಗುವುದರ ಜತೆಗೆ ಮಕ್ಕಳಿಗೂ ಸಮಾಜದ ಮೇಲಿನ ಕಳಕಳಿ ಹೆಚ್ಚುವಂತೆ ಮಾಡಲು ಪ್ರೋತ್ಸಾಹಿಸಿದಂತಾಗುತ್ತದೆ.

ಇನ್ನು ಉಮ್ಮಡಹಳ್ಳಿ ಶಾಲೆಯ ಮಕ್ಕಳ ಪ್ರಯತ್ನ ಇದೇ ಮೊದಲೇನಲ್ಲ. ಈ ಹಿಂದೆ ಡಿಜಿಟಲ್ ಗ್ರಂಥಾಲಯ, ಅದರ ಬಳಕೆ, ಶಿಕ್ಷಕರ ದಿನಾಚರಣೆ ಸೇರಿದಂತೆ ಹಲವು ವಿಶೇಷ ದಿನದಲ್ಲಿ ಡಿಸಿ, ಜಿಪಂ ಸಿಇಒ ಸೇರಿದಂತೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಅಧಿಕಾರಿಗಳಿಂದಲೂ ಪ್ರತಿಸ್ಪಂದನೆ ಪತ್ರವೂ ಬಂದಿದೆ. ಇದಲ್ಲದೆ ಶಾಲೆಯಲ್ಲಿ ವಿಶೇಷ ಚಟುವಟಿಕೆಗಳನ್ನು ಆಯೋಜಿಸಿ ರಾಜ್ಯಮಟ್ಟದಲ್ಲಿಯೂ ಗಮನಸೆಳೆದಿದೆ.

ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವಾಗಿ ಮಕ್ಕಳಿಂದ ಪತ್ರ ಬರೆಸಿ ಅಂಚೆ ಮೂಲಕ ಸಂಬಂಧಿಸಿವರಿಗೆ ಕಳುಹಿಸಲಾಗಿದೆ. ಇದಕ್ಕೆ ಸ್ಪಂದನೆಯೂ ಸಿಗುತ್ತಿದೆ. ಪ್ರಸ್ತುತ ಶಾಲೆಯಲ್ಲಿ ಬೇಸಿಗೆ ಶಿಬಿರ ನಡೆಯುತ್ತಿದ್ದು, ನಮ್ಮ ಶಾಲೆ ಸೇರಿದಂತೆ ವಿವಿಧ ಸಂಸ್ಥೆಗಳ 135ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಅವರಿಂದಲೂ ಪತ್ರ ಬರೆಸಲಾಗುತ್ತಿದೆ. ಇದಲ್ಲದೆ ಮತದಾನದ ಜಾಗೃತಿ ಕಾರ್ಯಕ್ರಮವನ್ನು ಶಿಬಿರದಲ್ಲಿ ಆಯೋಜಿಸಲಾಗುತ್ತಿದೆ.ನಾಗರಾಜುಮುಖ್ಯಶಿಕ್ಷಕ, ಉಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆ