ಜಿಲ್ಲೆ

ಗುರುಕುಲ ಅಭಿವೃದ್ಧಿಗೆ ಅನುದಾನ ನೀಡಲು ಆಗ್ರಹ

ಹುಬ್ಬಳ್ಳಿ : ಹುಬ್ಬಳ್ಳಿಯ ಡಾ. ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್​ನ ಭಾರತೀಯ ಶಾಸ್ತ್ರೀಯ ಸಂಗೀತ ಗುರುಕುಲ ಮಾದರಿಯ ಶಿಕ್ಷಣ ಕೇಂದ್ರದ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವಂತೆ ಆಗ್ರಹಿಸಿ ಮಾಜಿ ಸಿಎಂ, ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಗುರುಕುಲದಲ್ಲಿ ನಾಡಿನ ಐವರು ಶ್ರೇಷ್ಠ ಗುರುಗಳು ಹಾಗೂ ನಾಲ್ವರು ತಬಲಾ ಸಾಥಿದಾರರು ಕಳೆದ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಗುರುಕುಲದ ಅಭಿವೃದ್ಧಿಗೆ ಹಲವಾರು ಬೇಡಿಕೆಗಳನ್ನು ಕೇಳುತ್ತ ಬಂದಿದ್ದರೂ ಇದುವರೆಗೂ ಈಡೇರಿಲ್ಲ ಎಂದು ಶೆಟ್ಟರ್ ಅವರು ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಗುರುಕುಲ ಟ್ರಸ್ಟ್​ನ ಅಧ್ಯಕ್ಷರಾದ ಪ್ರಾದೇಶಿಕ ಆಯುಕ್ತರು ಕಳೆದ 12 ವರ್ಷಗಳಲ್ಲಿ ಒಂದು ಬಾರಿಯೂ ಸಭೆ ನಡೆಸಿಲ್ಲ. ಸರ್ಕಾರ ಪ್ರತಿ ವರ್ಷ ಗುರುಕುಲಕ್ಕೆ 1.25 ಕೋಟಿ ರೂ. ಅನುದಾನ ನೀಡುತ್ತದೆ. ಆದರೆ, 2023-24ರಲ್ಲಿ ಕೇವಲ 25 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇದರಿಂದಾಗಿ ಗುರುಕುಲದ ನಿತ್ಯದ ಕಾರ್ಯಚಟುವಟಿಕೆಗಳನ್ನು ನಡೆಸುವುದು ಕಷ್ಟವಾಗಿದೆ. ಪ್ರಾರಂಭದಿಂದಲೂ ಗುರುಕುಲದ ಕಟ್ಟಡಗಳ ದುರಸ್ತಿ ಕಾರ್ಯ ನಡೆದಿಲ್ಲ. ಕಟ್ಟಡಗಳು ಬಿದ್ದುಹೋಗುವ ದುಸ್ಥಿತಿ ತಲುಪಿವೆ. ಕಳೆದ ನಾಲ್ಕು ತಿಂಗಳಿಂದ ಇಲ್ಲಿನ ಗುರುಗಳಿಗೆ ಹಾಗೂ ತಬಲಾ ಸಾಥಿದಾರರಿಗೆ ಗೌರವ ಧನವೂ ಬಿಡುಗಡೆಗೊಂಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.