ಶಿಗ್ಗಾಂವಿ: ಬಸವರಾಜ ಬೊಮ್ಮಾಯಿ ಅವರು ಅಭಿವೃದ್ಧಿ ಕಾರ್ಯಗಳ ಮೂಲಕ ಮಾದರಿ ಕ್ಷೇತ್ರವನ್ನಾಗಿಸಲು ಶ್ರಮಿಸಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳು ಮುಂದುವರಿಯಲು ಕ್ಷೇತ್ರಕ್ಕೆ ಪುತ್ರ ಭರತ ಬೊಮ್ಮಾಯಿ ಅವಶ್ಯಕತೆ ಬಹಳಷ್ಟಿದ್ದು, ಉಪಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಗಂಗಣ್ಣ ಸಾತಣ್ಣನವರ ಹೇಳಿದರು.
ಶಿಗ್ಗಾಂವಿ ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಬಸವರಾಜ ಬೊಮ್ಮಾಯಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನದಿಂದಲೂ ನಮ್ಮೆಲ್ಲರ ಹಕ್ಕೊತ್ತಾಯ, ಭರತ್ ಬೊಮ್ಮಾಯಿಯವರು ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದಾಗಿತ್ತು. ಅದರಂತೆ ವರಿಷ್ಠರು ಭರತ್ ಬೊಮ್ಮಾಯಿ ಅವರನ್ನು ಅಭ್ಯರ್ಥಿಯನ್ನಾಗಿ ಘೊಷಿಸಿದ್ದಾರೆ ಎಂದರು.
ಕ್ಷೇತ್ರದಿಂದ ಬಿಜೆಪಿಯ ಟಿಕೆಟ್ ಬಯಸಿ 53 ಆಕಾಂಕ್ಷಿಗಳು ಹೈಕಮಾಂಡ್ಗೆ ಅರ್ಜಿ ಸಲ್ಲಿಸಿದ್ದರು. ಕ್ಷೇತ್ರಾದ್ಯಂತ ಸಂಚಾರ ಮಾಡಿ ಎಲ್ಲ ಅಭ್ಯರ್ಥಿಗಳ ಕುರಿತಂತೆ ಜನಾಭಿಪ್ರಾಯ ಪಡೆದು, ಭರತ ಅವರನ್ನು ಆಯ್ಕೆ ಮಾಡಿದ್ದಾರೆ. ಎಲ್ಲ ಟಿಕೆಟ್ ಆಕಾಂಕ್ಷಿಗಳು ಭರತ ಬೊಮ್ಮಾಯಿಯವರ ಆಯ್ಕೆಗೆ ಸಹಮತ ವ್ಯಕ್ತಪಡಿಸಿದ್ದು, ಯಾವುದೇ ಗೊಂದಲ ಇಲ್ಲ ಎಂದರು.
ಭರತ ಅವರು ಶ್ರೇಷ್ಠ ಉದ್ಯಮಿಯಾಗಿದ್ದು, ತಂದೆ ಬಸವರಾಜ ಬೊಮ್ಮಾಯಿಯವರ ರಾಜಕೀಯ ಮಾರ್ಗದರ್ಶನದಲ್ಲಿ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಲು ಚುನಾವಣೆ ಎದುರಿಸಿ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಬಿಜೆಪಿ ಮಂಡಳ ಅಧ್ಯಕ್ಷ ವಿಶ್ವನಾಥ ಹರವಿ, ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಸುಭಾಸ ಚವ್ಹಾಣ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸೀಮಗೌಡ್ರ, ಪುರಸಭೆ ಮಾಜಿ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ಶಿವಪ್ರಸಾದ ಸುರಗಿಮಠ, ಕರೆಪ್ಪ ಕಟ್ಟಿಮನಿ, ಶಂಕರಗೌಡ ಪೊಲೀಸಗೌಡ್ರ, ಕೊಟ್ರಪ್ಪ ನಡೂರ, ಶಶಿಧರ ಹೊನ್ನಣ್ಣನವರ, ಪರಶುರಾಮ ಸೊನ್ನದ, ಮಂಜುನಾಥ ಬ್ಯಾಹಟ್ಟಿ, ರೇನುಕನಗೌಡ ಪಾಟೀಲ, ಫಕೀರಜ್ಜ ಯಲಿಗಾರ, ರಮೇಶ ವನಹಳ್ಳಿ, ಇತರರಿದ್ದರು.
ಕಾರ್ಯಕರ್ತರ ಸಭೆ ಇಂದು
ಶಿಗ್ಗಾಂವಿ: ಶಿಗ್ಗಾಂವಿ- ಸವಣೂರ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಅ. 21ರಂದು ಮಧ್ಯಾಹ್ನ 3 ಗಂಟೆಗೆ ಸವಣೂರ ರಸ್ತೆ ಯಲ್ಲಿರುವ ಬೊಮ್ಮಾಯಿಯವರ ಸಭಾಭವನದಲ್ಲಿ ಬಿಜೆಪಿ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಸಭೆ ಕರೆಯಲಾಗಿದೆ. ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಇತರರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ ಹರವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.