ಹೊನ್ನಾವರ: ತಾಲೂಕಿನ ಯಲಗುಪ್ಪಾ ಶ್ರೀ ಧನ್ವಂತರಿ ದೇವಾಲಯದಲ್ಲಿ 30ನೇ ವರ್ಷದ ಶ್ರೀ ಧನ್ವಂತರಿ ಪುರಶ್ಚರಣ ಮಹಾಯಾಗ ಮತ್ತು ಶ್ರೀ ಧನ್ವಂತರಿ ಜಯಂತಿ ಮಹೋತ್ಸವ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿ ಶನಿವಾರ ಸಂಪನ್ನವಾಯಿತು.
ಸಮಾರೋಪ ಸಮಾರಂಭದಲ್ಲಿ ಪಾರಂಪರಿಕ ವೈದ್ಯರಾದ ಪಾರ್ವತಿ ಗಣಪತಿ ಹೆಗಡೆ, ಎಂ.ಜಿ. ಭಟ್ ಹಕ್ಕಿಮನೆ ಮತ್ತು ಗೋಪ್ರೇಮಿ ಶಿವಾನಂದ ಮಡಿವಾಳ ಅವರನ್ನು ಸನ್ಮಾನಿಸಲಾಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೀಶ ಸಿ.ಕೆ. ಮಾತನಾಡಿ, ಮನುಷ್ಯನ ಜೀವನ ಪ್ರಕೃತಿ ಮೇಲೆ ಅವಲಂಬಿತವಾಗಿದೆ. ಆರೋಗ್ಯ ಸಮಸ್ಯೆ ಆದಾಗ ಪ್ರಕೃತಿಯಲ್ಲಿ ಸಿಗುವ ಗಿಡಮೂಲಿಕೆಯನ್ನು ಔಷಧವಾಗಿ ಪಡೆಯುತ್ತೇವೆ. ಆದರೆ, ಇಂದು ವ್ಯಾಪಾರೀಕರಣದಿಂದಾಗಿ ಇಂಗ್ಲಿಷ್ ಮೆಡಿಸಿನ್ಗಳ ಪ್ರಚಾರ ಹೆಚ್ಚಾಗಿ ಆಯುರ್ವೆದದ ಮಹತ್ವ ಕಡಿಮೆಯಾಗಿದೆ. ಪ್ರಭೇದದ ಗಿಡಮೂಲಿಕೆಗಳ ಸಂರಕ್ಷಣೆಯ ಕಾರ್ಯವಾಗಬೇಕು ಎಂದರು.
ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ನಮ್ಮ ದೇಶದ ಪರಂಪರೆ ಸಂಸ್ಕೃತಿ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾಗಿದೆ. ಆದರೆ, ಇಂದು ಪುರಾಣಗಳನ್ನು ಟೀಕೆ ಮಾಡುವ ಕಾರ್ಯ ನಡೆಯುತ್ತಿದೆ. ನಮ್ಮ ಪರಂಪರೆ ಗೌರವಿಸುವ ಕೆಲಸ ಆಗಬೇಕಿದೆ ಎಂದರು.
ಉದ್ಯಮಿ ಅನಂತಮೂರ್ತಿ ಹೆಗಡೆ ಮಾತನಾಡಿ ಧನ್ವಂತರಿ ವಿಷ್ಣುವಿನ ಅವತಾರ ಶಕ್ತಿ. ಈ ಸ್ಥಳ ಆರೋಗ್ಯಕ್ಕೆ ಪ್ರತಿಕೂಲವಾದಂತಹ ಸ್ಥಳ. ಹೋಮ-ಹವನಗಳಿಂದ ವಾತಾವರಣ ಶುದ್ಧಿಯಾಗುತ್ತದೆ. ಇದರಿಂದ ಕಾಯಿಲೆಗಳು ದೂರವಾಗುತ್ತದೆ ಎಂದರು.
ಶ್ರೀ ಆಯುರ್ವೆದ ಆಯೋಗದ ರಾಷ್ಟ್ರೀಯ ಅಧ್ಯಕ್ಷ ಡಾ. ಪ್ರಕಾಶ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧನ್ವಂತರಿ ಮಹಾವಿಷ್ಣು ದೇವ ಆಡಳಿತ ಮಂಡಳಿ ಅಧ್ಯಕ್ಷ ಜಿ.ಕೆ. ಹೆಗಡೆ, ಶ್ರೀ ಕ್ಷೇತ್ರ ಧನ್ವಂತರಿ ಪುರಶ್ಚರಣ ಮಹಾಯಾಗ ಮಹೋತ್ಸವ ಸಮಿತಿ ಕಾರ್ಯದರ್ಶಿ ಡಾ. ಗೋಪಾಲ ಹೆಗಡೆ, ನೆಲೆಮಾವು ಮಠದ ಅಧ್ಯಕ್ಷ ಜಿ.ಎಂ. ಹೆಗಡೆ ಹೆಗ್ನೂರು, ಡಾ. ಜಿತೇಂದ್ರ ಜೋಕಿ, ಇತರರು ಉಪಸ್ಥಿತರಿದ್ದರು.
ಶ್ರೀ ಧನ್ವಂತರಿ ದೇವಳದಲ್ಲಿ ಕನ್ನಡ ಮತ್ತು ಸಂಸೃ್ಕ ಇಲಾಖೆ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ದೇವರಿಗೆ ಫಲಪಂಚಾಮೃತ ಅಭಿಷೇಕ, ಪುರುಷಸೂಕ್ತ ಅಭಿಷೇಕ, ಶ್ರೀ ಶಂಕರಾಚಾರ್ಯ ಅಷ್ಟೋತ್ತರ ಶತನಾಮ ಪೂಜೆ, ಹೋಮ-ಹವನಾದಿಗಳು ಹಾಗೂ ಉಚಿತ ಆರೋಗ್ಯ ಶಿಬಿರ ನಡೆದವು.