ಹಿರೇಕೆರೂರ: ಗುಣಮಟ್ಟದ ಶಿಕ್ಷಣ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಕರು ಹೆಚ್ಚಿನ ಶ್ರಮ ವಹಿಸಬೇಕು. ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಬೇಕು ಎಂದು ಶಾಸಕ ಯು.ಬಿ. ಬಣಕಾರ ಸೂಚಿಸಿದರು.
ತಾಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಕುರಿತು ಪಟ್ಟಣದ ತಾಪಂ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರೌಢಶಾಲಾ ಮುಖ್ಯಶಿಕ್ಷಕರ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು. ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಅತ್ಯಂತ ಕಳಪೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. 8ರಿಂದ 10ನೇ ತರಗತಿಯವರೆಗೂ ಒಂದೇ ತರನಾಗಿ ಹೋಲುವಂತಹ ವಿಷಯಾಧಾರಿತ ಪಠ್ಯ ಪುಸ್ತಕಗಳಿರುತ್ತವೆ. ಶಿಕ್ಷಕರು ನಿತ್ಯ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು. ಭಯ ಮುಕ್ತ ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಬೇಕು. ನಿರಂತರವಾಗಿ ಪುನರಾವರ್ತನೆ ಹಾಗೂ ಪ್ರಾತ್ಯಕ್ಷಿಕೆ ಏರ್ಪಡಿಸಬೇಕು ಎಂದರು.
ಕಲಿಕಾ ಪ್ರಕ್ರಿಯೆಯಲ್ಲಿ ಕಲಿಯುವವರ ಕೌಶಲ ಸುಧಾರಿಸಲು ಪ್ರಯತ್ನಿಸಬೇಕು. ಎಸ್ಸೆಸ್ಸೆಲ್ಸಿ ತರಗತಿಗಳಿಗೆ ಬೋಧನೆ ಮಾಡುವ ಮುಖ್ಯ ಶಿಕ್ಷಕರು ಸಹ ಶಿಕ್ಷಕರಿಗೆ ಪ್ರೇರಣಾ ಸಭೆ ಏರ್ಪಡಿಸಬೇಕು. ಪರೀಕ್ಷಾ ಫಲಿತಾಂಶ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ ಕಾರ್ಯರೂಪಕ್ಕೆ ತರಬೇಕು. ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಫಲಿತಾಂಶ ಶೂನ್ಯ ಬಂದ ಹಿನ್ನೆಲೆಯಲ್ಲಿ ಶಿಕ್ಷಕರ ವೇತನ ತಡೆ ಹಿಡಿಯಲಾಗಿದೆ. ತಾಲೂಕಿನಲ್ಲಿ 73 ಪ್ರೌಢ ಶಾಲೆಗಳ ಪೈಕಿ ಕೇವಲ 3 ಶಾಲೆಯಲ್ಲಿ 100ರಷ್ಟು ಫಲಿತಾಂಶ ಬಂದಿದೆ. ತಾಲೂಕಿನ ಒಟ್ಟಾರೆ ಫಲಿತಾಂಶ ಶೇ 59.12 ಆಗಿದೆ. ಫಲಿತಾಂಶ ಕಡಿಮೆ ಆದ ಶಾಲೆಗಳ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ ಮಾತನಾಡಿ, ಪ್ರತಿ ಶಾಲೆಯಲ್ಲಿಯೂ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ, ಗುಂಪು ಅಧ್ಯಯನ, ಘಟಕ ಪರೀಕ್ಷೆ, ವೇಕಾಪ್ ಕಾಲ್ ಸೇರಿದಂತೆ ಶಿಕ್ಷಕರಿಗೆ ಪುನಶ್ಚೇತನ ತರಬೇತಿ ಕಾರ್ಯಾಗಾರ ನಡೆಸುವ ಮೂಲಕ ಗುಣಮಟ್ಟ ಹೆಚ್ಚಬೇಕು, ಉತ್ತಮ ಫಲಿತಾಂಶ ತರಬೇಕು ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎನ್.ಸುರೇಶಕುಮಾರ, ಅಕ್ಷರ ದಾಸೋಹ ಸಮನ್ವಯ ಅಧಿಕಾರಿ ಎಚ್.ಎಚ್. ಜಾಡರ ಹಾಗೂ ತಾಲೂಕಿನ ಪ್ರೌಢಶಾಲಾ ಮುಖ್ಯಶಿಕ್ಷಕರು ಇದ್ದರು.