ಚನ್ನಪಟ್ಟಣ : ಸಮುದಾಯದಲ್ಲಿ ಕಾಲೆಳೆಯುವ ಪ್ರವೃತ್ತಿ ಕೊನೆಯಾಗುವವರೆಗೂ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಸ್ಫಟಿಕಪುರಿ ಮಹಾ ಸಂಸ್ಥಾನ ಪೀಠಾಧ್ಯಕ್ಷ ಶ್ರೀ ನಂಜಾವದೂತ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಶತಮಾನೋತ್ಸವ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಚನ್ನಪಟ್ಟಣ ಶಾಖೆಯ ಪ್ರಥಮ ವಾರ್ಷಿಕೋತ್ಸವ, ಒಕ್ಕಲಿಗ ವಧು-ವರರ ಸಮಾವೇಶ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ವೀರಶೈವ ಸಮುದಾಯ ನಮ್ಮಷ್ಟೇ ಜನಸಂಖ್ಯೆ ಹೊಂದಿದೆ. ಆ ಸಮುದಾಯದಲ್ಲಿ ಸಾವಿರಾರು ಮಠಗಳು ಹಾಗೂ ಸ್ವಾಮೀಜಿಗಳಿದ್ದಾರೆ. ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ಏಕತೆ ಪ್ರದರ್ಶನ ಮಾಡುತ್ತಾರೆ. ಆದರೆ, ನಮ್ಮಲ್ಲಿ ಏಕತೆಯ ಕೊರತೆಯಿದೆ ಎಂದರು.
ನಾವೆಲ್ಲರೂ ಸಮುದಾಯದ ಜತೆ ಸದಾ ಇರುತ್ತೇವೆ. ಸಮುದಾಯದಲ್ಲಿ ಸಮಗ್ರ ದೃಷ್ಟಿಕೋನದ ಕೊರತೆಯಿದೆ. ಹೇಳುವರು, ಕೇಳುವವರು ಇಲ್ಲದ ಸಮುದಾಯ ಎನಿಸಿಕೊಳ್ಳುತ್ತಿದೆ. ಇದು ಬದಲಾಗಬೇಕಿದೆ. ರಾಷ್ಟ್ರದ ಇತಿಹಾಸದಲ್ಲಿ ಒಕ್ಕಲಿಗರ ಇತಿಹಾಸ ಬಹಳಷ್ಟು ದೊಡ್ಡದಾಗಿದೆ. ಇಂತಹ ದೊಡ್ಡ ಸಮುದಾಯದಲ್ಲಿ ಜನ್ಮ ತಾಳಿರುವುದು ನಮ್ಮೆಲ್ಲರ ಭಾಗ್ಯ. ಜಾಗತಿಕ ವೇಗಕ್ಕೆ ಹೊಂದಿಕೊಳ್ಳುವ ಭರದಲ್ಲಿ ಆರೋಗ್ಯ, ನೆಮ್ಮದಿ ಬಿಟ್ಟು ಬೇರೆ ಏನನ್ನೋ ಅರಸುತ್ತಿದ್ದೇವೆ ಎಂದರು.
ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಸಮುದಾಯ ಒಗ್ಗೂಡುವ ಅವಶ್ಯಕತೆ ಇದೆ. ಪ್ರತಿಯೊಬ್ಬರಲ್ಲೂ ಸಮುದಾಯದ ಬಗ್ಗೆ ಕಾಳಜಿ ಹಾಗೂ ಅಭಿಮಾನ ಇರಬೇಕು ಎಂದು ಅಭಿಪ್ರಾಯಪಟ್ಟರು.
ಗೌಡಗೆರೆ ಶ್ರೀ ಚಾಮುಂಡೇಶ್ವರಿ ಬಸಪ್ಪನವರ ಶ್ರೀ ಕ್ಷೇತ್ರದ ಧರ್ಮದರ್ಶಿ ಡಾ.ಶ್ರೀ ಮಲ್ಲೇಶ್ ಗುರೂಜಿ ಮಾತನಾಡಿ, ಎಲ್ಲ ಧರ್ಮ ಹಾಗೂ ಸಮುದಾಯಗಳನ್ನು ಜತೆ ಕರೆದುಕೊಂಡು ಹೋಗುವ ಹೃದಯ ಶ್ರೀಮಂತಿಕೆ ಹೊಂದಿರುವುದು ಒಕ್ಕಲಿಗರ ಸಮುದಾಯ. ಸಮುದಾಯದ ಪ್ರಗತಿಯ ಬಗ್ಗೆ ಚಿಂತನೆ ನಡೆಯಬೇಕಿದೆ. ಮಕ್ಕಳ ಉನ್ನತ ಅಭ್ಯಾಸಕ್ಕೆ ಸಹಕಾರ ನೀಡುವ ಕೆಲಸವಾಗಬೇಕು ಎಂದರು.
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ರಾಜ್ಯಾಧ್ಯಕ್ಷ ಡಿ.ರವಿಕುಮಾರ್ ಮಾತನಾಡಿ, ಒಕ್ಕಲಿಗ ಸಮುದಾಯವನ್ನು ಸಂಘಟಿಸಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಮೇಲ್ಪಂಥಕ್ಕೆ ತರುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಅಸ್ತಿತ್ವಕ್ಕೆ ಬಂದ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಸೇವಾ ಚಟುವಟಿಕೆಗಳ ಮೂಲಕ ಯಶಸ್ವಿಯಾಗಿ ಒಂದು ವರ್ಷ ಪೂರೈಸಿರುವುದು ಸಂತಸದ ಸಂಗತಿ. ಮಕ್ಕಳಿಗೆ ಅನುಕೂಲವಾಗಲಿ ಎಂದು ವಧುವರರ ಸಮಾವೇಶ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಮೂವರು ಸ್ವಾಮೀಜಿಗಳನ್ನು ಬೆಳ್ಳಿರಥದ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ವಧು-ವರರ ಸಮಾವೇಶದಲ್ಲಿ ಹಲವರು ಭಾಗವಹಿಸಿದ್ದರು.
ರಾಮನಗರ ಜಿಲ್ಲಾಧ್ಯಕ್ಷ ಪಟೇಲ್ ಸಿ.ರಾಜು, ಚನ್ನಪಟ್ಟಣ ಶಾಖೆ ಅಧ್ಯಕ್ಷ ರಾಂಪುರ ಧರಣೀಶ್ ಕುಮಾರ್, ಟ್ರಸ್ಟ್ ಪದಾಧಿಕಾರಿಗಳಾದ ತಿಪ್ರೇಗೌಡ, ಎಲೆಕೇರಿ ಮಂಜುನಾಥ್, ಬಿ.ಎನ್.ಕಾಡಯ್ಯ, ಕೋಟಮಾರನಹಳ್ಳಿ ಚಂದ್ರಶೇಖರ್, ಶ್ರೀನಿವಾಸ್, ನಾಗವಾರ ಶಂಭೂಗೌಡ, ವಿ.ಸಿ.ಚಂದ್ರೇಗೌಡ, ರಾಂಪುರಸ್ವಾಮಿ, ರಮ್ಯಸ್ವಾಮಿಗೌಡ ಮಂಗಳಮ್ಮ, ರೂಪಾ ಇದ್ದರು.