ಜಿಲ್ಲೆ

ಪೋತಿ ಖಾತೆ ಅಭಿಯಾನದ ಪ್ರಯೋಜನ ಪಡೆದುಕೊಳ್ಳಲಿ

ವೀರೇಶ ಸೌದ್ರಿ

ಹಿರೇಕೆರೂರ: ಸರ್ಕಾರವು ಪೋತಿ ಖಾತೆ ಆಂದೋಲನ ಅಭಿಯಾನ ಹಮ್ಮಿಕೊಂಡಿದ್ದು ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ಎಚ್. ಪ್ರಭಾಕರಗೌಡ ಹೇಳಿದರು.

ತಾಲೂಕಿನ ಅಬಲೂರು ಗ್ರಾಮದಲ್ಲಿ ತಾಲೂಕು ಆಡಳಿತದಿಂದ ಮಂಗಳವಾರ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೃಷಿ ಜಮೀನಿನ ಹಲವು ಖಾತೆಗಳು ಮೃತರ ಹೆಸರಲ್ಲಿವೆ. ವಾರಸುದಾರರು ಜಮೀನುಗಳ ಸ್ವಾಧೀನ ಹೊಂದಿದ್ದರೂ ಅಂತಹ ಜಮೀನಿಗಳಿಗೆ ಸರ್ಕಾರಿ ಸೌಲಭ್ಯ, ಪರಿಹಾರ ವಿತರಣೆ, ಬೆಳೆವಿಮೆ ಸೇರಿದಂತೆ ವಿವಿಧ ಇಲಾಖೆಗಳ ಸಹಾಯಧನ ಹಾಗೂ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಪೋತಿ ಖಾತೆ ಆಂದೋಲನ ಅಭಿಯಾನ ಹಮ್ಮಿಕೊಂಡಿದೆ. ಅರ್ಹ ಫಲಾನುನುಭವಿಗಳು ಗ್ರಾಮಾಡಳಿತಾಧಿಕಾರಿಗಳಿಗೆ ಅಗತ್ಯ ದಾಖಲೆ ನೀಡಿ ಪ್ರಯೋಜನಪಡೆದುಕೊಳ್ಳಬೇಕು ಎಂದರು.

ಪ್ರಭಾರ ಉಪ ತಹಸೀಲ್ದಾರ್ ಎಸ್.ಎಂ. ಬಣಕಾರ ಮಾತನಾಡಿ, ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಖಾತೆ ಬದಲಾವಣೆಯಿಂದ ಸರ್ಕಾರದ ಸೌಲಭ್ಯಗಳು ನೇರವಾಗಿ ಲಭಿಸುತ್ತವೆ. ಜತೆಗೆ ಜಮೀನಿಗೆ ಆಧಾರ ಸಂಖ್ಯೆ ಜೋಡಣೆ ಆಗುವುದರಿಂದ ಜಮೀನಿನ ಪ್ರತಿ ವಹಿವಾಟು ಮೊಬೈಲ್ ಸಂದೇಶದ ಮೂಲಕ ಸಿಗುತ್ತದೆ ಎಂದರು.

ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಹರಿಜನ, ಗ್ರಾಮ ಆಡಳಿತಾಧಿಕಾರಿ ನಂದಿನಿ ಎಸ್. ಬಸವರಾಜಯ್ಯ ಗೌಡ್ರ, ಶಂಕ್ರಪ್ಪ ಗೌಡ್ರ, ಬಸಪ್ಪ ಮಡಿವಾಳರ, ಸಿದ್ದಪ್ಪ ಕುರುವತ್ತೇರ, ವೀರಭದ್ರಯ್ಯ ಆರಾಧ್ಯಮಠ, ನಿಂಗಪ್ಪ ಪಾಟೀಲ, ರುದ್ರಪ್ಪ ಹೊರಕೇರಿ, ಷಣ್ಮುಖಪ್ಪ ಮುದಗೋಳ, ವಿರೂಪಾಕ್ಷಪ್ಪ ಕುರುವತ್ತೇರ, ಚನಬಸಪ್ಪ ಪೂಜಾರ, ರಂಗಪ್ಪ ಹರಿಜನ್, ನವೀನ್ ಮಳವಳ್ಳಿ, ಮೂಕೇಶ ಮಳವಳ್ಳಿ, ಶೇಕಪ್ಪ ಹರಿಜನ ಇತರರು ಇದ್ದರು.