ಜಿಲ್ಲೆ

ಮತಾಂಧ ಕಿಡಿಗೇಡಿಗಳ ವಿರುದ್ಧ ಕ್ರಮವಾಗಲಿ

ಕೋಲಾರ ಡೆಸ್ಕ್

ಬಂಗಾರಪೇಟೆ: ಪಟ್ಟಣದಲ್ಲಿ ಈದ್​ ಮಿಲಾದ್​ ಮೆರವಣಿಗೆ ವೇಳೆ ಪ್ಯಾಲೆಸೆನ್​ ಬಾವುಟ ಪ್ರದರ್ಶಿಸಿ ಸಮಾಜದಲ್ಲಿ ಅಶಾಂತಿಗೆ ಯತ್ನಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದು ಪರಿಷತ್​, ಬಜರಂಗದಳ ಮತ್ತು ಹಿಂದು ಜಾಗರಣ ವೇದಿಕೆ ಮುಖಂಡರು ತಾಲೂಕಿನ ಪೊಲೀಸ್​ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್​ ಮಾತನಾಡಿ, ಜಿಲ್ಲೆಯ ಜನತೆ ಶಾಂತಿ, ಸೌಹಾರ್ದತೆ, ಮತ್ತು ಭ್ರಾತೃತ್ವದ ತಳಹದಿಯ ಮೇಲೆ ಜೀವನ ನಡೆಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ವಿಕೃತ ಮತಾಂಧ ಉಗ್ರವಾದಿಗಳು ಜಿಲ್ಲೆಯಲ್ಲಿ ಶಾಂತಿ ಕದಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ವಿಶ್ವ ಹಿಂದು ಪರಿಷತ್​ ಮುಖಂಡ ಶಿಂಧೆ ಮಾತನಾಡಿ, ದೇಶದ ಆಂತರಿಕ ಉಗ್ರಗಾಮಿ ಪ್ರಚೋದಿತ ಪುಂಡರು ಈದ್​ ಮಿಲಾದ್​ ವೇಳೆ ಅನ್ಯ ದೇಶದ ಧ್ವಜ ಪ್ರದರ್ಶಿಸಿ ದೇಶದ್ರೋಹಿ ಕೃತ್ಯ ಎಸಗಿದ್ದಾರೆ. ಇಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಜರಂಗದಳ ಮಹೇಶ್​ ಮಾತನಾಡಿ, ಉಗ್ರಗಾಮಿ ಕೃತ್ಯಗಳು ದೇಶಕ್ಕೆ ಮಾರಕವಾಗಿದ್ದು, ಇದನ್ನು ಪ್ರಾರಂಭಿಕ ಹಂತದಲ್ಲೇ ತಡೆಯುವುದು ಒಳಿತು. ಇತ್ತೀಚಿನ ದಿನಗಳಲ್ಲಿ ಪೊಲೀಸರೆಂದರೆ ಭಯವಿಲ್ಲದಂತಾಗಿದೆ. ಈದ್​ಮಿಲಾದ್​ ವೇಳೆ ಪೊಲೀಸರ ಮೇಲೆ ಅಪ್ರಚೋದಿತವಾಗಿ ಏಕಾಏಕಿ ಎರಗಿ ಮಾತಿನ ಚಕಮಕಿ ನಡೆಸಿದ್ದಾರೆ. ಪೊಲೀಸರ ಸಮಕ್ಷಮದಲ್ಲಿ ಪ್ಯಾಲೆಸೆನ್​ ಧ್ವಜ ಹಾರಿಸಿ ಕೋಮು ಸೌಹಾರ್ದತೆ ಕದಡಿದ್ದಾರೆ. ಇಂಥವರ ಹಿಂದೆ ಕಾಣದ ದುಷ್ಟ ಉಗ್ರವಾದಿ ಸಂಘಟನೆಗಳ ಬೆಂಬಲ ಇರಬಹುದೆಂಬ ಸಂಶಯ ಇದ್ದು, ಕೂಡಲೇ ಪೊಲೀಸ್​ ಇಲಾಖೆ ಸೂಕ್ತ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿದರು.