ಚಿಕ್ಕಬಳ್ಳಾಪುರ : ಕೇಂದ್ರ ಸರ್ಕಾರದ ಜನಪರ ಆಡಳಿತವನ್ನು ಬೆಂಬಲಿಸುವ ನಿಟ್ಟಿನಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಚುರುಕುಗೊಳಿಸುವಂತೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಸದಸ್ಯತ್ವದ ಅಭಿಯಾನದ ರಾಜ್ಯ ಸಹ ಸಂಚಾಲಕ ಪಿ.ಸಿ.ಮೋಹನ್ ಸಲಹೆ ನೀಡಿದರು.
ನಗರದ ಹಳೇ ಗಣಪತಿ ದೇವಾಲಯದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಶಕ್ತ ಬಿಜೆಪಿ ವಿಕಸಿತ ಭಾರತ ಸದಸ್ಯತ್ವ ಅಭಿಯಾನದ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಆಡಳಿತದ ಬಗ್ಗೆ ಜನರಲ್ಲಿ ವ್ಯಾಪಕ ಒಲವು ಇದೆ. ಇದಕ್ಕೆ ಅನುಗುಣವಾಗಿ ಸ್ಥಳೀಯ ಮಟ್ಟದಲ್ಲಿ ನಾಯಕರು ಉತ್ತಮ ಕೆಲಸಗಳ ಮೂಲಕ ಪಕ್ಷಕ್ಕೆ ಶಕ್ತಿ ತುಂಬಬೇಕಾಗಿದೆ. ಸದಸ್ಯತ್ವ ನೋಂದಣಿಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷ ಎನ್ನುವ ಗೌರವಕ್ಕೆ ಪಾತ್ರವಾಗಿದೆ. ಇದು ಮತ್ತಷ್ಟು ಹೆಚ್ಚಾಗಲು ಪ್ರತಿಯೊಬ್ಬ ಪದಾಧಿಕಾರಿಯೂ ನಿಗದಿತ ಗುರಿ ಸಾಧಿಸಬೇಕು ಎಂದರು.
ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ಕಾಂಗ್ರೆಸ್‌ನಲ್ಲಿ ಯಾರಾದರೂ ಬೆಳೆಯಲು ಪ್ರಯತ್ನಿಸಿದರೆ ಅವರಿಗೆ ಗೇಟ್‌ಪಾಸ್ ನೀಡಲಾಗುತ್ತದೆ. ಆದರೆ, ಬಿಜೆಪಿಯಲ್ಲಿ ಎಲ್ಲರಿಗೂ ಅವಕಾಶವಿದೆ. ತಳಮಟ್ಟದ ಕಾರ್ಯಕರ್ತರನ್ನು ಗುರುತಿಸಲಾಗುತ್ತದೆ. ಇಂತಹ ಪಕ್ಷವನ್ನು ಬೆಳೆಸಲು ಸದಸ್ಯರ ಸಂಖ್ಯೆ ಹೆಚ್ಚಾಗಬೇಕು. ಪ್ರತಿ ಬೂತ್‌ನಲ್ಲಿ ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಲಭಿಸಿದ ಮತ ಪ್ರಮಾಣಕ್ಕೆ ಅನುಗುಣವಾಗಿ ಸದಸ್ಯರು ಇರುವಂತಾಗಬೇಕು ಎಂದರು.
ಕಾರ್ಯಕರ್ತರ ಪಕ್ಷ
ಡಾ.ಶ್ಯಾವಾಪ್ರಸಾದ್ ಮುಖರ್ಜಿ, ದೀನ ದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾಣಿ ಸೇರಿ ಅನೇಕ ನಾಯಕರು ಪಕ್ಷ ಸಂಟನೆಗೆ ಶಕ್ತಿ ತುಂಬಿದ್ದಾರೆ. ಕಳೆದ ಮೂರು ಲೋಕಸಭೆ ಚುನಾವಣೆಗಳಲ್ಲೂ ಉತ್ತಮ ಸ್ಥಾನ ಗಳಿಸಿದ್ದು, ಬಿಜೆಪಿ ಸದಾ ಕಾರ್ಯಕರ್ತರ ಪಕ್ಷವೇ ಹೊರತು, ಒಂದು ಮನೆತನದ್ದಲ್ಲ. ಕಡು ಬಡಕುಟುಂಬದಲ್ಲಿ ಜನಿಸಿದ ನರೇಂದ್ರ ಮೋದಿ ಪ್ರಧಾನಿಯಾಗಿರುವುದೇ ಇದಕ್ಕೆ ಸಾಕ್ಷಿ. ರಾಜ್ಯದಲ್ಲಿ ಕಾಂಗ್ರೆಸ್ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ತಪ್ಪು ತಿಳಿವಳಿಕೆ ಮೂಡಿಸುತ್ತಿದೆ. ಇದರಿಂದ ರಾಜಕೀಯವಾಗಿ ಹಿನ್ನಡೆಯಾಗುತ್ತಿದೆ. ಇದಕ್ಕೆ ಈಗಲೇ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಸಂಸದ ಡಾ.ಕೆ. ಸುಧಾಕರ್ ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರಾಮಲಿಂಗಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎಸ್.ಮುರಳೀಧರ್, ಕೆ.ಬಿ. ಮುರಳಿ, ಮುಖಂಡರಾದ ಮಧು ಸೂರ್ಯನಾರಾಯಣ್ ರೆಡ್ಡಿ, ಮರುಳಕುಂಟೆ ಕಷ್ಣಮೂರ್ತಿ, ಅರುಣ್ ಬಾಬು ಮತ್ತಿತರರು ಇದ್ದರು.
ಅಭಿಯಾನದಲ್ಲಿ ಚರ್ಚೆ
ಸದಸ್ಯ ಅಭಿಯಾನಕ್ಕೆ ಸಂಬಂಧಿಸಿದಂತೆ ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮೋರ್ಚಾಗಳ ಅಧ್ಯಕ್ಷರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಲಾಯಿತು. ಸ್ಥಳೀಯವಾಗಿ ಅಭಿಪ್ರಾಯ ಸಂಗ್ರಹಿಸಲಾಯಿತು.
ಸೆ.1ರಿಂದ ಸಂಚಾರ
ಚಿಕ್ಕಬಳ್ಳಾಪುರದಲ್ಲಿ ಇತರ ಜಿಲ್ಲೆಗಳಿಗಿಂತಲೂ ಅತಿ ಹೆಚ್ಚಿನ ಸದಸ್ಯತ್ವ ನೋಂದಣಿ ಗುರಿ ಸಾಧನೆಯಾಗಬೇಕು. ಪ್ರಸ್ತುತ ಚಿಂತಾಮಣಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಚಟುವಟಿಕೆ ಕಡಿಮೆ ಇದ್ದು ಈ ಬಗ್ಗೆ ಚರ್ಚಿಸಬೇಕಾಗಿದೆ. ಸೆ.1ರಿಂದ ಸೆ.15ರವರೆಗೆ ಸಂಪೂರ್ಣವಾಗಿ ಪಕ್ಷ ಸಂಟನೆಯಲ್ಲಿ ತೊಡಗಿಸಿಕೊಳ್ಳಲಿದ್ದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ 16 ಮಂಡಲದಲ್ಲೂ ಪ್ರವಾಸ ಕೈಗೊಳ್ಳುವುದಾಗಿ ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.
ಶಾಸಕರು ತಪ್ಪು ತಿದ್ದಿಕೊಳ್ಳಲಿ
ಈಗಾಗಲೇ ಜನರು ಚಿಕ್ಕಬಳ್ಳಾಪುರ ಶಾಸಕರ ನಡವಳಿಕೆ, ವಾತು, ದರ್ಪದಿಂದ ಬೇಸತ್ತಿದ್ದಾರೆ. ಈಗಲಾದರೂ ಶಾಸಕರು ತಪ್ಪು ಸರಿಪಡಿಸಿಕೊಂಡು ಬದಲಾಗಬೇಕು ಎಂದು ಸಂಸದ ಡಾ ಕೆ.ಸುಧಾಕರ್ ಸಲಹೆ ನೀಡಿದರು. ನಗರಸಭೆ ಸದಸ್ಯರ ನಿಂದನೆ ಬಗೆಗಿನ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಕಷ್ಟಪಡದೆ ಹುದ್ದೆ ಸಿಕ್ಕಿದಾಗ ಅಸಡ್ಡೆ ಧೋರಣೆ ಹೆಚ್ಚಾಗುತ್ತದೆ ಎಂದು ವ್ಯಂಗ್ಯವಾಡಿದರು. ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಗೆ ಅವರದ್ದೇ ಆದ ಕಾರ್ಯವ್ಯಾಪ್ತಿ ಇರುತ್ತದೆ. ಬಹಳ ವರ್ಷಗಳಿಂದ ನಗರಸಭೆ ಸದಸ್ಯರಾಗಿ ಕೆಲಸ ವಾಡಿರುವವರ ಬಗ್ಗೆ ಗೌರವದಿಂದ ವಾತಾಡಬೇಕು. ಅದನ್ನು ಬಿಟ್ಟು ನಿಂದನೆ, ಟೀಕೆ ಸರಿಯಲ್ಲ. ಇಲ್ಲವಾದರೆ ಅವರ ಪಕ್ಷದವರೇ ಅವರ ವಿರುದ್ಧ ನಡೆದುಕೊಳ್ಳುತ್ತಾರೆ ಎಂದರು. ಇಲ್ಲಿನ ಭೂ ಅಭಿವದ್ಧಿ ಬ್ಯಾಂಕ್‌ನಲ್ಲಿ ಬಿಜೆಪಿ ಬೆಂಬಲಿತ ನಿರ್ದೇಶಕರು ನೇಮಕವಾದಾಗಿನಿಂದಲೂ ಯಾವುದೇ ರಾಜಕೀಯ ಬೆರೆಸಿಲ್ಲ. ಸಣ್ಣ ಭ್ರಷ್ಟಾಚಾರದ ಆಪಾದನೆಯೂ ಇಲ್ಲ. ಬ್ಯಾಂಕ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.