ಮಾಂಜರಿ: ಮಾನವನ ಅತಿಯಾದ ಚಟುವಟಿಕೆಗಳಿಂದ ಹೆಚ್ಚುತ್ತಿರುವ ಪರಿಸರ ಮಾಲಿನ್ಯ ತಡೆಗಟ್ಟಲು ಪರಿಸರ ಸಂರಕ್ಷಣೆ ನೀತಿ ಅಳವಡಿಸಿಕೊಳ್ಳುವ ಮೂಲಕ ಶಾಶ್ವತ ಸುಸ್ಥಿರ ಅಭಿವೃದ್ಧಿ ಪರವಾದ ಯೋಜನೆಗಳಿಗೆ ಆದ್ಯತೆ ನೀಡಬೇಕಾಗಿದೆ ಎಂದು ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ಸಮೀಪದ ಅಂಕಲಿ ಗ್ರಾಮದ ಕೆಎಲ್ಇ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವಿಶ್ವ ಪರಿಸರ ದಿನದ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ನಿರಂತರವಾಗಿ ಪಶುಪ, ಸಸ್ಯ ಸಂಪತ್ತುಗಳ ನಾಶ ವೇಗವಾಗಿ ನಡೆಯುತ್ತಿದೆ. ಕರ್ನಾಟಕದ ಅರಣ್ಯ ಪ್ರದೇಶಗಳು ಮತ್ತು ನದಿತೀರಗಳ ಬಳಿಯ ಜೀವ ವೈವಿಧ್ಯ ಅತ್ಯಂತ ಅಪಾಯ ಮಟ್ಟದಲ್ಲಿದೆ. ದೇಶದಲ್ಲಿ ಶೇ. 25 ಜೀವ ವೈವಿಧ್ಯದ ಕೊರತೆಯು ಕಂಡುಬರುತ್ತಿದ್ದು, ಜಾಗತಿಕ ಮಟ್ಟದಲ್ಲಿ ಇನ್ನೂ ಹೆಚ್ಚಿದೆ. ಇವೆಲ್ಲವುಗಳ ಸಂರಕ್ಷಣೆಗೆ ತಕ್ಷಣ ಮುಂದಾಗದಿದ್ದರೆ ಪರಿಸರ ಸಮತೋಲನವೇ ಹಳಿತಪ್ಪಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಪ್ಲಾಸ್ಟಿಕ್ ಮಾಲಿನ್ಯ: ದೇಶದಲ್ಲಿ 400 ಮಿಲಿಯನ್ ಟನ್ಗೂ ಹೆಚ್ಚು ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದ್ದು, ಅದರಲ್ಲಿ 11 ಮಿಲಿಯನ್ ಟನ್ ಸಮುದ್ರಕ್ಕೆ ಸೇರುತ್ತಿದೆ ಎಂಬ ಅಂದಾಜಿದೆ. ಪ್ಲಾಸ್ಟಿಕ್ ಮಾಲಿನ್ಯ ತಡೆಗೆ ಜನರು, ಕೈಗಾರಿಕೆಗಳು ಹಾಗೂ ಸರ್ಕಾರಗಳು ಪ್ಲಾಸ್ಟಿಕ್ ಉತ್ಪಾದನೆ, ಬಳಕೆ ಮತ್ತು ತ್ಯಜಿಸುವ ವಿಧಾನಗಳ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಸಲಹೆ ನೀಡಿದರು.
ಏಕಬಳಕೆ ಪ್ಲಾಸ್ಟಿಕ್ ನಿಲ್ಲಲಿ: ನಗರ ಪ್ರದೇಶಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ಮುಕ್ತಗೊಳ್ಳಬೇಕು. ಕಾಲುವೆ, ಜಲಮೂಲಗಳನ್ನು ಪ್ಲಾಸ್ಟಿಕ್ ಮಾಲಿನ್ಯದಿಂದ ದೂರವಿಡಬೇಕಾಗಿದೆ. ಪ್ಲಾಸ್ಟಿಕ್ನಿಂದ ವನ್ಯಜಿವಿಗಳಿಗೂ ಹಾನಿಯುಂಟಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಮಧ್ಯೆ ಏಕಬಳಕೆ ಪ್ಲಾಸ್ಟಿಕ್ ನಿಷೇಧ ಮತ್ತು ಜಾಗೃತಿ ಹೆಚ್ಚಾದರೂ ನಿಯಮ ಪಾಲನೆಯಾಗುತ್ತಿಲ್ಲ. ಈ ವರ್ಷದ ಪರಿಸರ ದಿನದ ೂಷವಾಕ್ಯ ಪ್ಲಾಸ್ಟಿಕ್ ಮಾಲಿನ್ಯ ಕೊನೆಗೊಳಿಸಿ ಸುಸ್ಥಿರತೆ ಅಳವಡಿಸಿಕೊಳ್ಳುವುದಾಗಿದೆ ಎಂದು ಡಾ. ಕೋರೆ ಹೇಳಿದರು.
ಜ್ಯೋತಿ ತಮ್ಮಗೌಡ, ಬಿ.ಎಸ್. ಅಂಬಿ, ಕೆ.ಬಿ. ಶಿಂಧೆ, ಪಾರ್ಥ ಸಾರಥಿ ನಂದಾ, ಮಹುವಾ ಎಂ.ಎಸ್. ಕಾನಡೆ, ವಿ.ಡಿ. ನಾಯ್ಕ್, ಎಸ್.ಬಿ. ಕುಂಬಾರ, ಎಸ್.ಎಸ್. ನಿಡಗುಂದೆ, ವಿನಾಯಕ ಪಾಟೀಲ, ಅಕ್ಷತಾ ಮಾನೆ, ಸಂತೋಷ ಹಿರೇಮಠ, ಬಿ.ಎಸ್. ಜಕಾತಿ, ಎಸ್. ಡಿ. ಮಾನೆ, ಮಹಾಂತೇಶ ಮೈಶಾಳೆ, ಎಸ್.ಕೆ. ಕಾಂಬಳೆ, ಎಂ.ಆರ್. ನಾಗರಾಜ, ಎಂ.ಎಸ್. ಸಾಳುಂಕೆ, ಎ.ಡಿ. ಜಾಧವ, ಪಿ.ಎ. ಡಿಗ್ಗೆವಾಡಿ, ಜಿ.ಪಿ. ಕಾಂಬಳೆ, ಎ.ಎಸ್. ಶಿರಗಾವಿ, ಟಿ.ಎಸ್. ಬಾಕಳೆ, ಸರೋಜಿನಿ ಬಾಕಳೆ ಇತರರಿದ್ದರು.