ವಿಜಯಪುರದ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ರಂಗವೈಭವ ಹವ್ಯಾಸಿ ನಾಟಕ ತಂಡದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೀನಾಸಂ ಹಿರಿಯ ಪದವೀಧರ ಡಾ. ಸಂಗಮೇಶ ಮೇತ್ರಿ ಅವರನ್ನು ಸನ್ಮಾನಿಸಲಾಯಿತು. ವಿಶ್ವೇಶ್ವರಯ್ಯ ಮಠಪತಿ, ಶರಣಗೌಡ ಪಾಟೀಲ, ಸುಮಾ ಬೋಳರೆಡ್ಡಿ ಮತ್ತಿತರರಿದ್ದಾರೆ. 
ಜಿಲ್ಲೆ

ಹಿರಿಯ ಕಲಾವಿದರನ್ನು ಗೌರವಿಸೋಣ

ದತ್ತಾತ್ರೇಯ ಪಿ ಕುಲಕರ್ಣಿ

ವಿಜಯಪುರ : ರಂಗಭೂಮಿಯ ಹಿರಿಯ ಕಲಾವಿದರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಎಕ್ಸಲಂಟ್ ಪ.ಪೂ. ಕಾಲೇಜಿನ ಉಪನ್ಯಾಸಕ ಶರಣಗೌಡ ಪಾಟೀಲ ಹೇಳಿದರು.

ನಗರದ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ರಂಗವೈಭವ ಹವ್ಯಾಸಿ ನಾಟಕ ತಂಡದವರು ಇತ್ತೀಚೆಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಂಗಭೂಮಿಗೆ ವಿಜಯಪುರ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಹಂದಿಗನೂರು ಸಿದ್ರಾಮಪ್ಪ, ಶ್ರೀರಂಗರನ್ನು ಹಿಡಿದು ಇಂದಿನ ಎಸ್.ಎಂ. ಖೇಡಗಿ, ಎಲ್.ಬಿ. ಶೇಖ್ ಮಾಸ್ತರರವರೆಗೆ ವೃತ್ತಿ ರಂಗಭೂಮಿ ಬೆಳೆದು ಬಂದದ್ದು ಒಂದು ಇತಿಹಾಸ. ಅದಕ್ಕೆ ಪೂರಕವಾಗಿ ಹವ್ಯಾಸಿ ರಂಗಭೂಮಿಯೂ ತನ್ನದೆಯಾದ ಕೊಡುಗೆ ನೀಡಿದ್ದು, ರಂಗಭೂಮಿಯ ಕಲಾವಿದರಿಗೆ ಗೌರವ ನೀಡುವ ಕಾರ್ಯ ಎಲ್ಲರೂ ಮಾಡಬೇಕು ಎಂದರು.

ಇಲ್ಲಿನ ದಿ. ಶ್ರೀನಿವಾಸ ತಾವರಗೇರಿ, ಅಶೋಕ ಬಾದರದಿನ್ನಿ, ವಿಶ್ವೇಶ್ವರಯ್ಯ ಸುರಪುರ, ಡಾ. ಸತೀಶ ಜಿಗಜಿನ್ನಿ, ಜಿ.ಎನ್. ದೇಶಪಾಂಡೆ, ಜಗದೀಶ ಗಲಗಲಿ ಹಾಗೂ ಅಂಬಾದಾಸ ಜೋಶಿ ಮುಂತಾದ ಹವ್ಯಾಸಿ ಕಲಾವಿದರು ನಾಟಕಗಳ ಪ್ರದರ್ಶಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ಮಾಧವ ಗುಡಿ ಮಾತನಾಡಿ, ಆಧುನಿಕತೆ ದಿನದಲ್ಲಿಯೂ ಸಹ ಇಂತಹ ಹವ್ಯಾಸಿ ಕಲಾ ತಂಡಗಳು ನಾಟಕಗಳನ್ನು ಪ್ರದರ್ಶಿಸುವ ಮೂಲಕ ಜನರಲ್ಲಿ ನಾಟಕಗಳ ಬಗ್ಗೆ ಅಭಿರುಚಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನೀನಾಸಂ ಹಿರಿಯ ಪದವೀಧರ ಡಾ. ಸಂಗಮೇಶ ಮೇತ್ರಿ, ವಿಜಯಪುರ ಜಿಲ್ಲೆ ರಂಗಭೂಮಿಯ ತವರೂರು. ಇಲ್ಲಿ ಹಲವು ಕಲಾವಿದರಿದ್ದಾರೆ. 30 ವರ್ಷಗಳ ನನ್ನ ನಾಟಕ ಕ್ಷೇತ್ರದ ಕಲೆ ಗುರುತಿಸಿ ನನ್ನನ್ನು ಗೌರವಿಸಿದ ರಂಗವೈಭವ ತಂಡದ ಸದಸ್ಯರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಗದೀಶ ಗಲಗಲಿ, ಡಾ. ವ್ಹಿ.ಡಿ. ಐಹೊಳ್ಳಿ, ವಿಶ್ವೇಶ್ವರಯ್ಯ ಮಠಪತಿ, ಅಪ್ಪಣ್ಣ ನಾಯಕ, ವಿಜಯಕುಮಾರ ಪಟ್ಟಣಶೆಟ್ಟಿ ಹಾಗೂ ಉದಯ ಬೆಳ್ಳೆಣ್ಣವರ ವೇದಿಕೆಯಲ್ಲಿದ್ದರು.

ಹಿರಿಯ ಕಲಾವಿದರಾದ ವಿದ್ಯಾಧರ ಸಾಲಿ, ಪೊನ್ನಪ್ಪ ಕಡೇಮನಿ, ಚಂದ್ರು ನಿಂಬಾಳ ಮತ್ತಿತರರಿದ್ದರು.

ಪ್ರವೀಣ ಡೋಣೂರ ಪ್ರಾರ್ಥಿಸಿದರು. ಡಾ. ಸುಮಾ ಬೋಳರೆಡ್ಡಿ ಸ್ವಾಗತಿಸಿದರು. ರಂಗ ವೈಭವದ ಅಧ್ಯಕ್ಷ ಅಂಬಾದಾಸ ಜೋಶಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಜಯಕುಮಾರ ಸಜ್ಜನ ವಂದಿಸಿದರು.