ಜಿಲ್ಲೆ

ಅಂಧತ್ವ ನಿವಾರಣೆಗೆ ಸಂಕಲ್ಪ ತೊಡೋಣ

ಮರಿದೇವ ಹೂಗಾರ

ಹುಬ್ಬಳ್ಳಿ: ಆಕ್ಸ್​ಫರ್ಡ್ ಕಾಲೇಜ್ ಅಧ್ಯಕ್ಷ ವಸಂತ ಹೊರಟ್ಟಿ ಅವರ ಜನ್ಮ ದಿನ ನಿಮಿತ್ತ ನಗರದ ಕಾಲೇಜ್ ಆವರಣದಲ್ಲಿ ವಿವಿಧ ವೈದ್ಯಕೀಯ ಸಂಸ್ಥೆಗಳೊಂದಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಮಂಗಳವಾರ ಏರ್ಪಡಿಸಲಾಗಿತ್ತು.

ನೇತ್ರತಜ್ಞ ಡಾ. ಶ್ರೀಕೃಷ್ಣ ನಾಡಗೌಡ ಮಾತನಾಡಿ, ದೇಶದಲ್ಲಿ 3 ಕೋಟಿ ಜನರಲ್ಲಿ ಪೂರ್ಣಪ್ರಮಾಣದ ಅಂಧತ್ವವಿದೆ. ಬಹಳಷ್ಟು ಜನರ ನೇತ್ರದಾನದಿಂದ ಇವರಿಗೆ ಜಗತ್ತು ನೋಡಲು ಸಾಧ್ಯವಾಗಲಿದೆ. ಅಪೌಷ್ಟಿಕತೆ ಹಾಗೂ ವೈದ್ಯಕೀಯ ಕೊರತೆ ಕಾರಣದಿಂದ ಬಹಳಷ್ಟು ಜನರಲ್ಲಿ ಕುರುಡುತನ ಕಂಡುಬರುತ್ತಿದೆ. ನೇತ್ರದಾನದ ಜಾಗೃತಿ ಮಾಡುವ ಮೂಲಕ ಅಂಧತ್ವ ನಿವಾರಿಸಲು ಸಂಕಲ್ಪ ಮಾಡೋಣ ಎಂದರು.

ಎಸ್​ಡಿಎಂ ಆಸ್ಪತ್ರೆಯ ಮೂತ್ರಪಿಂಡ ತಜ್ಞ ಡಾ. ನಾಗರಾಜ ನಾಯಕ್ ಮಾತನಾಡಿ, ನಟ ಪುನೀತ್​ರಾಜಕುಮಾರ, ಸಂಚಾರಿ ವಿಜಯ ಅವರೆಲ್ಲ ಯುವಕರಿಗೆ ಮಾದರಿ. ಇವರಂತೆ ಕಣ್ಣು, ಅಂಗಾಂಗ ದಾನ ಮಾಡಲು ಮುಂದೆ ಬರಬೇಕು. ಅಂಗಾಂಗ ದಾನದ ಮಹತ್ವವನ್ನು ಎಲ್ಲೆಡೆ ಸಾರಬೇಕು ಎಂದರು.

ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ, ಸ್ವರ್ಣ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ.ವಿ.ಎಸ್.ವಿ. ಪ್ರಸಾದ ಮಾತನಾಡಿದರು.

ರಾಷ್ಟ್ರೋತ್ಥಾನ ರಕ್ತಭಂಡಾರದ ಆಡಳಿತಾಧಿಕಾರಿ ದತ್ತಮೂರ್ತಿ ಕುಲಕರ್ಣಿ ಅವರು ರಕ್ತದಾನದ ಮಹತ್ವ ತಿಳಿಸಿಕೊಟ್ಟರು.

ಜನ್ಮ ದಿನ ನಿಮಿತ್ತ ಆಕ್ಸ್​ಫರ್ಡ್ ಕಾಲೇಜ್ ಅಧ್ಯಕ್ಷ ವಸಂತ ಹೊರಟ್ಟಿ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ ದೇಹದಾನ ಮಾಡಿದ ಗಿರಿಜಾ ಲೂತಿಮಠ, ಸಂಜಯ ಅಳಗುಂಡಗಿ ಅವರನ್ನು ಗೌರವಿಸಲಾಯಿತು.

ಡಾ. ಅಗರವಾಲ್ ಕಣ್ಣಿನ ಆಸ್ಪತ್ರೆಯಿಂದ ನೇತ್ರ ಹಾಗೂ ಪವಾರ್ ಸ್ಕಿನ್ ಆಂಡ್ ಆಂಕೋ ಕೇರ್ ಕ್ಲಿನಿಕ್​ನಿಂದ ಚರ್ಮರೋಗ ತಪಾಸಣೆ ಜರುಗಿತು. ರಾಷ್ಟ್ರೋತ್ಥಾನ ರಕ್ತ ಭಂಡಾರದಿಂದ ರಕ್ತದಾನ ಮತ್ತು ಎಸ್​ಡಿಎಂ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಗಾಂಗ ದಾನ ಜಾಗೃತಿ ಶಿಬಿರ ನಡೆಯಿತು. ಬಹಳಷ್ಟು ಜನರು ರಕ್ತದಾನ ಮಾಡಿದರು. ಕೆಲವರು ನೇತ್ರದಾನ ಮತ್ತು ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿದರು.

ಡಾ. ಮಧುಲಿಕಾ ವಸಂತ ಹೊರಟ್ಟಿ, ಪ್ರಾಚಾರ್ಯ ಪ್ರೊ.ಎಂ. ಮಂಜುನಾಥ, ಇತರರು ಇದ್ದರು.