ಮೈಸೂರು; ಪ್ಲಾಸ್ಟಿಕ್ ಬಳಕೆ ನಿಷೇಧಿಸಲು ನಾವೆಲ್ಲರು ಸಂಕಲ್ಪ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ.ದಿನೇಶ್ ತಿಳಿಸಿದರು.
ಕರುನಾಡ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಹಾಗೂ ಬಟ್ಟೆ ಬ್ಯಾಗ್ ಬಳಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ಲಾಸ್ಟಿಕ್ ವಸ್ತುಗಳು ಕೆರೆ, ಭೂಮಿ, ಸಮುದ್ರದ ಒಡಲು ಸೇರಿ ಪ್ರಾಣಿ-ಪಕ್ಷಿ, ಜಲಚರಗಳ ಜೀವ ಮತ್ತು ಪ್ರಕೃತಿಗೆ ಹಾನಿಯಾಗುತ್ತಿದೆ. ಭೂಮಿಯಲ್ಲಿ ಪ್ಲಾಸ್ಟಿಕ್ ಕರಗಲು 500 ರಿಂದ 1000 ವರ್ಷಗಳು ಬೇಕಾಗುತ್ತದೆ. ಪ್ಲಾಸ್ಟಿಕ್ ಬಳಕೆ ನಿಷೇಧದಲ್ಲಿ ನಾವೆಲ್ಲರೂ ನಿರ್ಲಕ್ಷೃ ತೋರುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ಲಾಸ್ಟಿಕ್ ನಿಷೇಧಿಸದಿದ್ದರೆ ಭವಿಷ್ಯದಲ್ಲಿ ದೊಡ್ಡ ಅಪಾಯ ಎದುರಾಗಲಿದೆ. ಅಪರಿಮಿತ ಪ್ಲಾಸ್ಟಿಕ್‌ನಿಂದ ಮನುಷ್ಯನ ಊಹೆಗೂ ನಿಲುಕದಷ್ಟು ಪ್ರಮಾಣದಲ್ಲಿ ಹಾನಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಭೂಮಿಯ ಒಡಲು ಸೇರುವ ಪ್ಲಾಸ್ಟಿಕ್ ಸೂರ್ಯನ ಕಿರಣಗಳಿಗೆ ಸೋಕಿದಾಗ ಕೆಮಿಕಲ್ ಹೊರಬಂದು ನದಿ, ಸಮುದ್ರಕ್ಕೆ ಸೇರುತ್ತದೆ. ಆ ಮೂಲಕ ಮನುಷ್ಯನ ದೇಹಕ್ಕೂ ಪ್ರವೇಶಿಸುತ್ತದೆ. ಇದರಿಂದ ಕ್ಯಾನ್ಸರ್, ಬಂಜೆತನ ಸಹಿತ ಹಲವಾರು ಕಾಯಿಲೆಗಳಿಗೆ ತುತ್ತಾಗುವಂತಾಗಿದೆ ಎಂದು ಎಚ್ಚರಿಸಿದರು.
ಏಕ ಬಳಕೆ ಪ್ಲಾಸ್ಟಿಕ್ ಪ್ರಪಂಚದಲ್ಲೇ ದೊಡ್ಡ ಪಿಡುಗು. ಇಡೀ ಪ್ರಪಂಚದಲ್ಲಿ 400ಕ್ಕಿಂತ ಹೆಚ್ಚು ಮಿಲಿಯನ್ ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದೆ. ಈ ಪೈಕಿ ಭಾರತದಲ್ಲಿ 25-30 ಸಾವಿರ ಟನ್ ಉತ್ಪಾದನೆಯಾಗುತ್ತಿದೆ. ಆದರೆ ಶೇ.60ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹಿಂಪಡೆಯುತ್ತಿದ್ದೇವೆ. ಈ ಪ್ರಮಾಣದಲ್ಲಿಯೇ 25 ರಿಂದ 30 ವರ್ಷ ಏಕ ಬಳಕೆ ಪ್ಲಾಸ್ಟಿಕ್ ಬಳಸಿದರೆ ಸಮುದ್ರದಲ್ಲಿ ಜಲಚರಗಳಿಗಿಂತ ಹೆಚ್ಚಾಗಿ ಪ್ಲಾಸ್ಟಿಕ್ ಇರುತ್ತದೆ. ಹೀಗಾಗಿ ನಿತ್ಯದ ಬದುಕಿನಲ್ಲಿ ಪ್ಲಾಸ್ಟಿಕ್ ಬಳಕೆ ತಡೆಯದಿದ್ದರೆ ಮುಂದಿನ ಪೀಳಿಗೆಗೆ ಪ್ಲಾಸ್ಟಿಕ್ ಭೂಮಿಯನ್ನು ಕೊಟ್ಟು ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮೈಸೂರು ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷ ಪುಟ್ಟಸಿದ್ದೇಗೌಡ, ಕಾರ್ಯದರ್ಶಿ ಉಮೇಶ್, ಕರುನಾಡ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಬಸವರಾಜ್, ಗೌರವಾಧ್ಯಕ್ಷ ಎಂ.ರಾಮೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಂ.ಸತೀಶ್, ಜಿಲ್ಲಾಧ್ಯಕ್ಷ ಕೆ.ವೇಣುಗೋಪಾಲ್, ಜಿಲ್ಲಾ ಉಪಾಧ್ಯಕ್ಷ ಸಿದ್ದೇಗೌಡ, ನಗರಾಧ್ಯಕ್ಷ ಹರ್ಷಿತ್ ಗೌಡ, ನಗರ ಉಪಾಧ್ಯಕ್ಷ ಎನ್.ಮಹೇಶ್, ರಾಜ್ಯ ಯುವ ಘಟಕದ ಅಧ್ಯಕ್ಷ ಸಂಜಯ್, ರಾಜು, ಆಕಾಶ್, ರವಿಕುಮಾರ್, ಸಂತೋಷ, ಅರುಣ್ ಕುಮಾರ್, ರವಿ ಇನ್ನಿತರರಿದ್ದರು.