ಜಿಲ್ಲೆ

ರೋಗದ ಭಯ ಹೋಗಲಾಡಿಸೋಣ

ಮರಿದೇವ ಹೂಗಾರ

ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಹಾಗೂ ಬೆಂಗಳೂರು ರೋಟರಿ ಗ್ಲೋಬಲ್ ಯೋಗ ಕ್ಲಬ್ ಆಶ್ರಯದಲ್ಲಿ ನಗರದ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಡಾ. ಪ್ರಭಾಕರ ಕೋರೆ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಉಚಿತ ಯೋಗ ಮತ್ತು ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿತ್ತು.

ಅಮೆರಿಕ ವಿಶ್ವವಿದ್ಯಾಲಯದ ಹೋಲಿಸ್ಟಿಕ್ ಹೆಲ್ತ್ ವಿಭಾಗದ ನಿರ್ದೇಶಕ ಹಾಗೂ ಖ್ಯಾತ ಯೋಗ ಪಟು ಡಾ. ದಕ್ಷಿಣಾಮೂರ್ತಿ ಅವರು ಮಾತನಾಡಿ, ವೈದ್ಯಕೀಯ ಮಾಫಿಯಾ ಈಗ ಎಲ್ಲೆಡೆ ವಿಸ್ತರಿಸಿದೆ. ಮೊದಲಿದ್ದ ಕಾಯಿಲೆಗಳಿಗೂ ಈಗ ಬರುತ್ತಿರುವ ರೋಗಗಳಿಗೂ ವ್ಯತ್ಯಾಸವಿದೆ. ಆದರೆ, ಇವುಗಳಿಗೆ ನಾವು ಹೆದರದೆ ನಮ್ಮ ಆರೋಗ್ಯ ನಾವು ಕಾಪಾಡಿಕೊಳ್ಳುವ ಅಗತ್ಯವಿದೆ. ರೋಗದ ಮೂಲ ಭಯ. ಈ ಭಯವನ್ನು ಹೋಗಲಾಡಿಸುವ ಮೂಲಕ ಆರೋಗ್ಯವನ್ನು ಸಂರಕ್ಷಿಸಿಕೊಳ್ಳಬೇಕು ಎಂದರು.

ಯೋಗ ಶಿಕ್ಷಕ ವಿನಯಕುಮಾರ ಮಾತನಾಡಿ, ಬೆಂಗಳೂರಿನಲ್ಲಿ ಡಿ. 23 ಮತ್ತು 24ರಂದು ನಡೆಯಲಿರುವ ವಿಶ್ವ ಯೋಗ ಸಮ್ಮೇಳನ-2023ರ ಪೂರ್ವಭಾವಿಯಾಗಿ ಈ ಶಿಬಿರ ಏರ್ಪಡಿಸಲಾಗಿದೆ ಎಂದರು.

ಮೂರು ತಾಸುಗಳ ಅವಧಿಯ ಈ ಶಿಬಿರದಲ್ಲಿ ಯೋಗ ಶಿಕ್ಷಕರು, ಶಿಬಿರಾರ್ಥಿಗಳ ವೈಯಕ್ತಿಕ ಆರೋಗ್ಯ ಸಮಸ್ಯೆಗಳನ್ನು ಆಲಿಸಿ ಸೂಕ್ತ ಸಲಹೆ -ಸೂಚನೆ ನೀಡಿದರು.

ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಅಧ್ಯಕ್ಷ ಅರವಿಂದ ಕುಬಸದ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಕ್ಲಬ್ ಹುಬ್ಬಳ್ಳಿಯ ಕಮ್ಯುನಿಟಿ ಸರ್ವಿಸ್ ನಿರ್ದೇಶಕ ಸುರೇಂದ್ರ ಪೋರವಾಲ, ಕ್ಲಬ್​ನ ನಿಯೋಜಿತ ಅಧ್ಯಕ್ಷ ಬಾಪು ಬಿರಾದಾರ ಉಸ್ತುವಾರಿ ವಹಿಸಿದ್ದರು. ಶಿವಪುತ್ರ ಮುಕರ್ತಿಹಾಳ, ಈಶ್ವರ ಗುಳಗಣ್ಣವರ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಕಾರ್ಯದರ್ಶಿ ವಸಂತ ಭಸ್ಮೆ ಇತರರು ಇದ್ದರು.