ಪಾಂಡವಪುರ : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಆಡಳಿತ ವತಿಯಿಂದ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ 78ನೇ ಸ್ವಾತಂತ್ರೃ ದಿನವನ್ನು ಅದ್ದೂರಿಯಗಿ ಆಚರಿಸಲಾಯಿತು.
ವಿವಿಧ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ ತಂಡದ ವಿದ್ಯಾರ್ಥಿಗಳು ಬ್ಯಾಂಡ್‌ಸೆಟ್ ಸದ್ದಿನೊಂದಿಗೆ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿದರು. ಉಪ ವಿಭಾಗಾಧಿಕಾರಿ ಎಲ್.ಎಂ.ನಂದೀಶ್ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿದರು. ಪಟ್ಟಣದ ಫ್ರೆಂಚ್‌ರಾಕ್ಸ್ ಶಾಲೆ, ಬಿಜಿಎಸ್, ಬಡ್ಸ್, ರೋಟರಿ, ನಿರ್ಮಲಾ ಕಾನ್ವೆಂಟ್ ಸೇರಿದಂತೆ ವಿವಿಧ ಶಾಲಾ ಮಕ್ಕಳು ದೇಶ ಭಕ್ತಿ ಸಾರುವ ಗೀತೆಗಳಿಗೆ ನೃತ್ಯ ಮಾಡಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಅನೇಕ ಮಹನೀಯರ ತ್ಯಾಗ, ಬಲಿದಾನದಿಂದ ನಾವಿಂದು 78ನೇ ಸ್ವಾತಂತ್ರೃ ದಿನವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದೇವೆ. ಬ್ರಿಟಿಷರು ದೇಶಕ್ಕೆ ಕಾಲಿಡುವ ಮುನ್ನ ನಮ್ಮ ದೇಶ ಸಂಪದ್ಭರಿತವಾಗಿತ್ತು. ಇಲ್ಲಿನ ಜನರ ಜೀವನ ಸುಂದರವಾಗಿತ್ತು. ಇಂಗ್ಲಿಷರು ನಮ್ಮಿಂದ ಎಷ್ಟೇ ಲೂಟಿ ಮಾಡಿದರೂ ಸ್ವಾತಂತ್ರ್ಯದ ಬಳಿಕ ನಾವು ಇತರ ಮುಂದುವರಿದ ದೇಶಗಳ ಸಾಲಿನಲ್ಲಿ ನಿಂತು ಅಭಿವೃದ್ಧಿ ಕಾಣುತ್ತಿದ್ದೇವೆ ಎಂದರು.
ನಮ್ಮ ದೇಶದಲ್ಲಿ ಆಹಾರ ಭದ್ರತೆ ಸ್ಥಿರವಾಗಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿ ಸಾಧಿಸಿ ಉತ್ಪಾದನೆಯನ್ನು ಹೆಚ್ಚಿಸಿಕೊಂಡು ಇಲ್ಲಿ ಉತ್ಪಾದಿಸುವ ಉತ್ಪನ್ನಗಳನ್ನು ಹೊರ ದೇಶಗಳಿಗೂ ರಫ್ತು ಮಾಡುತ್ತಿದ್ದೇವೆ. ಹಿರಿಯರ ಮಾರ್ಗದರ್ಶನದಲ್ಲಿ ಅನೇಕ ಸಾಧನೆ ಮಾಡಿದ್ದೇವೆ. ಯುವಕರಿಂದ ಈ ದೇಶ ಪ್ರಗತಿ ಸಾಧಿಸುತ್ತಿದೆ. ಯುವ ಸಮುದಾಯ ದೇಶದ ಶಕ್ತಿಯಾಗಿದ್ದು, ನಾವು ವಿಶ್ವದ ಆರ್ಥಿಕತೆಯಲ್ಲಿ 6ನೇ ಸ್ಥಾನದಲ್ಲಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಇದೇ ವೇಳೆ ತಾಲೂಕು ಆಡಳಿತದ ವತಿಯಿಂದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಸನ್ಮಾನಿಸಲಾಯಿತು.
ತಹಸೀಲ್ದಾರ್ ಎಸ್.ಸಂತೋಷ್, ತಾಪಂ ಇಒ ಲೋಕೇಶ್‌ಮೂರ್ತಿ, ಬಿಇಒ ರವಿಕುಮಾರ್, ಶಿರಸ್ತೇದಾರ್ ಮೋಹನ್, ಪುರಸಭೆ ಸದಸ್ಯರಾದ ಪಾರ್ಥಸಾರಥಿ, ಚಂದ್ರು, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಮುಖಂಡರಾದ ಎಸ್.ದಯಾನಂದ್, ವಕೀಲ ಮುರುಳಿ ಇತರರು ಇದ್ದರು.