ವಿಜಯವಾಣಿ ಸುದ್ದಿಜಾಲ ಧಾರವಾಡ
ನಮ್ಮ ನಾಡಿನ ಇತಿಹಾಸ, ಅರಿವು ನಮ್ಮಲ್ಲಿ ಛಲ, ಅಭಿಮಾನ, ಹೆಮ್ಮೆ ಮೂಡಿಸುತ್ತದೆ. ಹಿಂದಿನ ಹೋರಾಟಗಳ ಕಿಚ್ಚು ನಮ್ಮ ಮುಂದಿನ ದಾರಿಗೆ ಬೆಳಕಾಗುತ್ತದೆ. ಎಲ್ಲರೂ ಸೇರಿ ನಮ್ಮ ಐತಿಹಾಸಿಕತೆ ಸ್ಮರಿಸಿ, ರಕ್ಷಿಸೋಣ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ನಗರದ ವೈ.ಬಿ. ಅಣ್ಣಿಗೇರಿ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಇತಿಹಾಸ ಉಪನ್ಯಾಸಕರ ಸಂಘ ಹಾಗೂ ಅಣ್ಣಿಗೇರಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಅಖಂಡ ಧಾರವಾಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಕುರಿತ ಉಪನ್ಯಾಸ ಮಾಲಿಕೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಸ್ವಾತಂತ್ರ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಗಿದೆ. 77 ಉಪನ್ಯಾಸಗಳ ಮೂಲಕ ಸ್ಮರಿಸಲಾಗಿದೆ. ಇತಿಹಾಸ ಉಪನ್ಯಾಸಕರು, ಪ್ರಾಧ್ಯಾಪಕರು, ಸಂಶೋಧಕರು ಹಾಗೂ ಇತಿಹಾಸ ತಜ್ಞರು ಸ್ವಾತಂತ್ರ್ಯ ಹೋರಾಟಗಾರರು, ಹೋರಾಟದ ಪ್ರೇರಕ ವ್ಯಕ್ತಿಗಳ ಕುರಿತು ಉಪನ್ಯಾಸ ನೀಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗೈದ ಇತಿಹಾಸದ ರಾಷ್ಟ್ರ ನಾಯಕರನ್ನು ಸ್ಮರಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಉದಯ ನಾಯಕ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಪಿ. ಸುರೇಶ ಮಾತನಾಡಿದರು. ಅಶೋಕ ಸವಣೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಪ್ರೊ. ನಾಗೇಶ ಅಣ್ಣಿಗೇರಿ, ರೇಖಾ ಅಣ್ಣಿಗೇರಿ, ಪ್ರೊ. ಸಚಿನ ಕಮತೆ, ಇತರರು ಇದ್ದರು.
ಡಾ.ರಾಮು ಮೂಲಗಿ, ವಿಶ್ವೇಶ್ವರಿ ಹಿರೇಮಠ ಹಾಗೂ ತಂಡದಿಂದ ದೇಶಭಕ್ತಿ ಗೀತೆ ಪ್ರಸ್ತುತಪಡಿಸಲಾಯಿತು. ಪ್ರೊ. ಬಸವರಾಜ ಉಡಿಕೇರಿ ಸ್ವಾಗತಿಸಿದರು. ಪ್ರಕಾಶ ಸುಣಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ವಿರಕ್ತಮಠ ನಿರೂಪಿಸಿದರು. ಮಹಾಬಳೇಶ್ವರಯ್ಯ ಕೆಂಭಾವಿಮಠ ವಂದಿಸಿದರು.