ಸವಣೂರ: ಪ್ರತಿನಿತ್ಯ ನಿಷ್ಠೆಯಿಂದ ಕಾಯಕದಲ್ಲಿ ತೊಡಗುವ ಪೌರ ಕಾರ್ವಿುಕರಿಗೆ ಸಾರ್ವಜನಿಕರು ಸಹಕಾರ ನೀಡಿದಲ್ಲಿ ಮಾತ್ರ ನಗರ ಸ್ವಚ್ಛತೆಯಿಂದ ಕಂಗೊಳಿಸಲು ಸಾಧ್ಯ ಎಂದು ಪುರಸಭೆ ಅಧ್ಯಕ್ಷ ಅಲ್ಲಾವುದ್ದೀನ್ ಮನಿಯಾರ ತಿಳಿಸಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಪೌರ ಕಾರ್ವಿುಕರ ದಿನಾಚರಣೆ, ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಪೌರ ಕಾರ್ವಿುಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಕೈಗೊಳ್ಳುವ ಪೌರ ಕಾರ್ವಿುಕರು ವೃತ್ತಿಯೊಂದಿಗೆ ಉತ್ತಮ ಆರೋಗ್ಯ ಕುರಿತು ಜಾಗೃತಿ ವಹಿಸಲು ಮುಂದಾಗುವುದು ಅವಶ್ಯವಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪೌರ ಕಾರ್ವಿುಕರ ಸೇವೆ ಶ್ಲಾಘನೀಯ. ಮಳೆ ಚಳಿ, ಬಿಸಿಲು ಲೆಕ್ಕಿಸದೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡು ನಗರದ ಸ್ವಚ್ಛತೆಗೆ ಮುಂದಾಗಿರುವುದು ಹೆಮ್ಮೆಯ ವಿಷಯ. ಗಡಿ ಭಾಗದಲ್ಲಿ ದೇಶವನ್ನು ರಕ್ಷಿಸುವ ಸೈನಿಕರಂತೆ ನಗರದ ಸ್ವಚ್ಛತಾ ಕಾರ್ಯ ಕೈಗೊಂಡು ಜನಸಾಮಾನ್ಯರ ಆರೋಗ್ಯ ಕಾಯುತ್ತಿರುವುದು ವಿಶೇಷ. ಪೌರ ಕಾರ್ವಿುಕರಿಗೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಪೂರೈಸಿ ಆರೋಗ್ಯ ಕಾಪಾಡಲು ತಪಾಸಣೆ ಶಿಬಿರ ಆಯೋಜಿಸಲಾಗಿದೆ. ಪುರಸಭೆಯ ಕಾಯಂ ಪೌರ ಕಾರ್ವಿುಕರಿಗೆ ಸರ್ಕಾರ ಘೊಷಣೆ ಮಾಡಿದಂತೆ ತಲಾ 7 ಸಾವಿರ ಪ್ರೋತ್ಸಾಹ ಧನ ಜಮಾವಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕಾರ್ವಿುಕರಿಗೆ ಗೃಹ ಭಾಗ್ಯ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿ ಯಾಗಿ 7.5 ಲಕ್ಷ ನೀಡುವ ಮೂಲಕ ಸಹಕಾರ ನೀಡಿದೆ ಎಂದರು.
ಬಿಎಚ್ಇಒ ಎಸ್.ಎಫ್. ಹನಕನಹಳ್ಳಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನೇತೃತ್ವ ವಹಿಸಿ ಪೌರ ಕಾರ್ವಿುಕರಿಗೆ ಆರೋಗ್ಯ ರಕ್ಷಣೆ ಕುರಿತು ಉಪನ್ಯಾಸ ನೀಡಿದರು.
ಪೌರ ಕಾರ್ವಿುಕರ ಸಂಘದ ಪದಾಧಿಕಾರಿಗಳಾದ ನಾಗಪ್ಪ ಮೇಗಲಮನಿ, ಬಸವರಾಜ ಸಿದ್ದಮ್ಮನವರ, ಮರೆಪ್ಪ ಮುಳಗುಂದ, ಆರೇಂದ್ರ ಮೈಲಮ್ಮನವರ ಹಾಗೂ ಶಿವಾನಂದ ಮಯಾಗೇರಿ ಸೇರಿ 62 ಪೌರ ಕಾರ್ವಿುಕರನ್ನು ಸನ್ಮಾನಿಸಲಾಯಿತು.
ಪುರಸಭೆ ಸದಸ್ಯರಾದ ಪೀರಅಹ್ಮದ್ ಗವಾರಿ, ಉಮೇಶ ಕಲ್ಮಠ, ಶಿವಾನಂದ ಅರಳಿಕಟ್ಟಿ, ಫಜಲ್ಅಹ್ಮದಖಾನ್ ಪಠಾಣ, ಅಲ್ಲಾವುದ್ದೀನ್ಖಾನ್ ಪಠಾಣ, ಅಬ್ದುಲ್ನಾಶೀರ್ ಖಿದ್ಮತಗಾರ, ಸೋಪಿಯಾ ಚುಡಿಗಾರ, ಜೀನತಬಾನು ಹುಲಗೂರ, ಕಚೇರಿ ವ್ಯವಸ್ಥಾಪಕ ಮಹೇಶ ದೊಡ್ಡಣ್ಣವರ, ಕಂದಾಯ ಅಧಿಕಾರಿ ಸುರೇಶ ಪೂಜಾರ, ಪ್ರಕಾಶ ಕಬಾಡಿ, ಇತರರಿದ್ದರು. ಭಗವಂತಾಚಾರ್ಯ ಮಠದ ನಿರ್ವಹಿಸಿದರು.