ಜಿಲ್ಲೆ

ಗುರುಶಿಷ್ಯ ಪರಂಪರೆ ಆದರ್ಶದಲ್ಲಿ ಧರ್ಮ ರಕ್ಷಿಸೋಣ : ಹಿಂದು ಜನಜಾಗೃತಿ ಸಮಿತಿ ದೀಪಾ ತಿಲಕ್

ಮೈಸೂರು: ಗುರುಶಿಷ್ಯ ಪರಂಪರೆಯ ಆದರ್ಶವನ್ನಿಟ್ಟು ಧರ್ಮರಕ್ಷಣೆಗಾಗಿ ಸಂಘಟಿತರಾಗೋಣ ಎಂದು ಹಿಂದು ಜನಜಾಗೃತಿ ಸಮಿತಿಯ ಮುಖ್ಯಸ್ಥೆ ಸೌ. ದೀಪಾ ತಿಲಕ್ ಕರೆ ನೀಡಿದರು.

ವಿಶ್ವೇಶ್ವರನಗರದಲ್ಲಿ ಗುರುವಾರ ಆಯೋಜಿಸಿದ್ದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ಹಿಂದೂ ಸಮಾಜದ ಮೇಲೆ ಅನೇಕ ರೀತಿ ಆಘಾತಗಳಾಗುತ್ತಿವೆ. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಮಾಯಕ ಹಿಂದೂಗಳ ಮೇಲೆ ದೌರ್ಜನ್ಯವೆಸಗಿದ ಘಟನೆಗಳು ಬೆಳಕಿಗೆ ಬಂದಿವೆ. ಮಂಡ್ಯದಲ್ಲಿ ಮತಾಂಧರು ಗೋಹತ್ಯೆ ಮಾಡುತ್ತಿರುವಾಗ ಅನೇಕ ಹಿಂದುಗಳು ಗೋರಕ್ಷಣೆ ಮಾಡಲು ಮುಂದಾದರೆ ಪೊಲೀಸರು ಗೋರಕ್ಷಕರನ್ನೇ ಬಂಧಿಸಿದ್ದರು. ವಕ್ಫ್ ಕಾನೂನಿನ ವಿರುದ್ಧ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಮತಾಂಧರು ಗಲಭೆಗಳನ್ನು ನಡೆಸಿದ್ದರು. ಉತ್ತರಪ್ರದೇಶ, ರಾಜಸ್ಥಾನ ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ಮತಾಂಧರು ಕಲ್ಲು ತೂರಿ ಹಿಂಸಾಚಾರ ನಡೆಸಿದರು. ದೇಶಾದ್ಯಂತ ಹಿಂದುಗಳ ವಿರುದ್ಧ ದಾಳಿಗಳು ಆಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಭಾರತದ ಮೇಲೆ ಆಂತರಿಕ ಮತ್ತು ಬಾಹ್ಯ ಶತ್ರುಗಳಿಂದ ನಡೆಯುತ್ತಿರುವ ಆಕ್ರಮಣಗಳು ಕೇವಲ ವಿಸ್ತರಣಾವಾದಕ್ಕಾಗಿ ಅಲ್ಲ, ಬದಲಾಗಿ ಹಿಂದು ಧರ್ಮವನ್ನು ನಾಶಪಡಿಸಲು ನಡೆಯುತ್ತಿವೆ. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ‘ದೇಶ’ ಕೇಳಿ ಗುಂಡು ಹಾರಿಸದೆ, ’ಧರ್ಮ’ ಕೇಳಿ ಗುಂಡು ಹಾರಿಸಿದರು. ಇನ್ನು ನಮ್ಮ ಮುಂದೆ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಮತಾಂತರದಂತಹ ಅನೇಕ ಸಮಸ್ಯೆಗಳು ಇವೆ. ಇದೆಲ್ಲವನ್ನು ನೋಡಿದಾಗ ಹಿಂದೆ ಪ್ರಭು ಶ್ರೀರಾಮರ ಕಾಲದಲ್ಲಿ, ಶಿವಾಜಿ ಮಹಾರಾಜರ ಕಾಲದಲ್ಲಿ, ಹಕ್ಕ ಬುಕ್ಕರ ಕಾಲದಲ್ಲಿ ಇದೇ ರೀತಿ ಧರ್ಮಸಂಕಟಗಳು ಎದುರಿಗಿದ್ದವು. ಆ ಎಲ್ಲ ಸಂದರ್ಭಗಳಲ್ಲಿಯೂ ಅವರು ಗುರುಗಳ ಮಾರ್ಗದರ್ಶನ ಪಡೆದು ಧರ್ಮಸಂಸ್ಥಾಪನೆಯ ಕಾರ್ಯ ಮಾಡಿದ್ದಾರೆ. ಹಾಗಾಗಿ ಗುರುಶಿಷ್ಯ ಪರಂಪರೆಗೆ ಹಿಂದಿನಿಂದಲೂ ಅಷ್ಟೇ ಮಹತ್ವವಿದೆ. ಈಗ ನಾವೂ ಸಹ ಇಂದಿನ ಗುರುಪೂರ್ಣಿಮೆಯ ದಿನ ಧರ್ಮಸಂಸ್ಥಾಪನೆಗಾಗಿ ಸಂಘಟಿತರಾಗಲು ಸಂಕಲ್ಪ ಮಾಡಬೇಕಿದೆ ಎಂದು ಕರೆ ನೀಡಿದರು.

ವಕೀಲ ಸಿ.ವಿ. ಕೇಶವಮೂರ್ತಿ ಮಾತನಾಡಿ, ಭಾರತ ಜಗದ್ಗುರು ಆಗುವುದು ಕೇವಲ ಜಿಡಿಪಿ ಏರಿಕೆ ಅಥವಾ ಉತ್ಪಾದನೆಯಿಂದ ಮಾತ್ರವಲ್ಲ. ನಿಜವಾಗಲೂ ನಾವು ಅನುಕರಣೀಯ ಜೀವನ ಪದ್ಧತಿಯಿಂದ ವಿಶ್ವದಲ್ಲಿ ಜಗದ್ಗುರುಗಳಾಗಬಹುದು ಎಂದು ಹೇಳಿದರು. ಲೇಖಕ ಪ್ರವೀಣ್ ಮಾವಿನಕಾಡು, ಶ್ರೀರಾಮಸೇನೆಯ ಬಿ.ಸಿ.ಶಶಿಕಾಂತ್ ಹಾಗೂ ಇತರರು ಇದ್ದರು.