ರಾಯಚೂರು ಸೊಳ್ಳೆಯು ನೋಡಲು ಗಾತ್ರದಲ್ಲಿ ಅತ್ಯಂತ ಚಿಕ್ಕದಾದರೂ ಸೋಂಕಿತ ಸೊಳ್ಳೆಯು ಕಚ್ಚಿದಾಗ ಹರಡುವ ರೋಗಗಳು ಗಂಭೀರವಾಗಿರುತ್ತವೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುರೇಂದ್ರಬಾಬು ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೃಷ್ಣ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಸೊಳ್ಳೆ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಲೇರಿಯಾ ರೋಗವು ಅನಾಫೀಲಿಸ್ ಹೆಣ್ಣು ಸೊಳ್ಳೆಯ ಕಚ್ಚುವಿಕೆಯಿಂದ ಹರಡುತ್ತದೆಂದು ರೋನಾಲ್ಡ್ ರಾಸ್ ಪತ್ತೆ ಹಚ್ಚಿದ ಸ್ಮರಣಾರ್ಥ ಜಗತ್ತಿನ ಎಲ್ಲ ದೇಶಗಳಲ್ಲಿ ಈ ದಿನಾಚರಣೆ ನಡೆಯುತ್ತಿದೆ. ಹಲವು ವರ್ಷಗಳ ಹಿಂದೆ ಹೆಚ್ಚು ಮಲೇರಿಯಾ ಪ್ರಕರಣಗಳು ವರದಿಯಾಗುತ್ತಿದ್ದು, ಈಗ ಜಿಲ್ಲೆಯಲ್ಲಿ ಗಣನೀಯವಾಗಿ ಕಡಿಮೆಯಾಗಿವೆ. ಸೊಳ್ಳೆಗಳ ಕಚ್ಚುವಿಕೆಯಿಂದ ಹರಡುವ ಮಲೇರಿಯಾ, ಡೆಂಗೆ, ಚಿಕೂನ್‌ಗುನ್ಯಾ, ಆನೆಕಾಲು, ಮೆದುಳು ಜ್ವರ ಮುಂತಾದ ರೋಗಗಳ ಅಪಾಯ ಹಾಗೂ ತಡೆಯ ಕ್ರಮಗಳ ಕುರಿತು ಜಿಲ್ಲೆಯಾದ್ಯಂತ ತಮ್ಮ ತಮ್ಮ ಗ್ರಾಮ, ನಗರ, ಪಟ್ಟಣಗಳ ವಾರ್ಡಗಳಲ್ಲಿ ಸಮುದಾಯದ ಸಹಭಾಗಿತ್ವದೊಂದಿಗೆ ನಿಯಂತ್ರಣ ಮಾಡೋಣವೆಂದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಿಗಳ ನಿಯಂತ್ರಣಾಧಿಕಾರಿ ಡಾ.ಚಂದ್ರಶೇಖರಯ್ಯ ಸ್ವಾಮಿ ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ಸೊಳ್ಳೆಗಳ ಉತ್ಪತ್ತಿ ತಾಣಗಳ ನಿಯಂತ್ರಣಕ್ಕಾಗಿ ಮನೆಯ ಸುತ್ತಲು ನೀರು ನಿಲ್ಲದಂತೆ, ಹಳೆಯ ಟೈಯರ್, ಟಿನ್, ಬಕೇಟ್, ಕಲ್ಲಿನಡೋಣಿ, ಸಿಮೆಂಟ್ ತೊಟ್ಟಿ, ಹೂವಿನ ಕುಂಡಲ ಇತ್ಯಾದಿಗಳಲ್ಲಿ ನೀರು ಜಮಾವಣೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಾನಸಿಕ ತಜ್ಞ ಡಾ.ಮನೋಹರ ಪತ್ತಾರ, ಸಹಾಯಕ ಆಡಳಿತ ಅಧಿಕಾರಿ ಶಹಜಾನ್, ಜಿಲ್ಲಾ ದೈಹಿಕ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್.ದಾಸಪ್ಪನವರ, ಜಿಲ್ಲಾ ಕೀಟ ಶಾಸ್ತ್ರಜ್ಞೆ ಗಂಗೋತ್ರಿ, ಉಪಜಿಲ್ಲಾ ಆರೋಗ್ಯಶಿಕ್ಷಣಾಧಿಕಾರಿ ಬಸಯ್ಯ, ಕಚೇರಿ ಅಧಿಕ್ಷಕ ಕೃಷ್ಣಮೂರ್ತಿ, ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ತಾಯಪ್ಪ, ಮಲೇರಿಯಾ ನಿಯಂತ್ರಣಧಿಕಾರಿ ಡಾ.ಶಕೀರ ಸೇರಿದಂತೆ ಅನೇಕರು ಇದ್ದರು.