ಮೈಸೂರು: ಚಿತ್ರಮಂದಿರ ಮತ್ತು ಜಿಮ್ ಮಾದರಿಯಲ್ಲೇ ಈಜುಕೊಳ ತೆರೆಯಲು ಅವಕಾಶ ನೀಡುವಂತೆ ಕರ್ನಾಟಕ ಈಜು ಸಂಸ್ಥೆಯ ಸದಸ್ಯ ಎಸ್.ಸುಂದರೇಶ್ ಒತ್ತಾಯಿಸಿದರು.
ಕರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಸರ್ಕಾರ ಈಜುಕೊಳದ ಮೇಲೆ ಹೇರಿರುವ ನಿರ್ಬಂಧದಿಂದ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಈಜುಪಟುಗಳ ತರಬೇತಿಗೆ ಅಡ್ಡಿಯಾಗಿದೆ. ತರಬೇತಿಗೆ ಮೂರು ದಿನ ಗೈರಾದರೆ ಅಂಥ ಸ್ಪರ್ಧಿಗೆ ಹೆಚ್ಚುವರಿಯಾಗಿ ಆರು ದಿನ ತರಬೇತಿ ನೀಡಬೇಕು. ಹೀಗೆ ಈಜುಕೊಳ ಮುಚ್ಚುವುದರಿಂದ ರಾಜ್ಯದಲ್ಲಿ ಸುಮಾರು 2500ಕ್ಕೂ ಹೆಚ್ಚು ಮತ್ತು ಜಿಲ್ಲೆಯಲ್ಲಿ 350ಕ್ಕೂ ಹೆಚ್ಚು ಈಜು ಸ್ಪರ್ಧಿಗಳಿಗೆ ಸಮಸ್ಯೆಯಾಗಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಿತ್ರಮಂದಿರ, ರೆಸ್ಟೋರೆಂಟ್ ಮತ್ತು ಜಿಮ್‌ಗಳಿಗೆ ನೀಡಲಾಗಿರುವ ಶೇ.50ರಷ್ಟು ನಿಯಮವನ್ನು ಈಜುಕೊಳಕ್ಕೂ ಅನ್ವಯಿಸುವಂತೆ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು.
ಲಾಕ್‌ಡೌನ್ ಮತ್ತು ನಿರ್ಬಂಧದಿಂದ ಈಜುಕೊಳ ಮತ್ತು ಸಂಸ್ಥೆಯವರು ಸಂಕಷ್ಟದಲ್ಲಿದ್ದಾರೆ. ಬೇಸಿಗೆ ಸಮಯದಲ್ಲಿ ಹೆಚ್ಚು ಜನ ಈಜಲು ಬರುತ್ತಾರೆ. ಇಂಥ ಸಮುದಲ್ಲಿ ಈಜುಕೊಳ ನಿರ್ಬಂಧಿಸಿ ಆದಾಯಕ್ಕೆ ಕತ್ತರಿ ಹಾಕಬೇಡಿ ಎಂದು ಕೋರಿದರು.
ಸಂಸ್ಥೆ ಜಂಟಿ ಕಾರ್ಯದರ್ಶಿ ಎಂ.ಬಿ.ನಾಭಿರಾಜ್ ಮಾತನಾಡಿ, ಇದುವರೆಗೆ ಈಜುಕೊಳದಿಂದ ಕರೊನಾ ಸೋಂಕು ಪತ್ತೆಯಾಗಿರುವುದು ಎಲ್ಲಿಯೂ ವರದಿಯಾಗಿಲ್ಲ. ಅಲ್ಲದೆ ಈಜು ಅಭ್ಯಾಸ ಮಾಡುವುದರಿಂದ ಶ್ವಾಸಕೋಶದ ಆರೋಗ್ಯವನ್ನು ಉತ್ತಮಗೊಳಿಸುವ ಜತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಹೀಗಾಗಿ ಈಜುವುದರಿಂದ ಎಲ್ಲ ವಯೋಮಾನದವರಿಗೂ ಚೈತನ್ಯ ನೀಡುತ್ತದೆ. ಈಜುಕೊಳದಲ್ಲಿ ಸರ್ಕಾರ ಹೊರಡಿಸಿರುವ ಕೋವಿಡ್‌ನ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸುತ್ತೇವೆ. ಅಲ್ಲದೆ ಈಜುಕೊಳದಲ್ಲಿ ಕ್ಲೋರಿನೇಟೆಡ್ ಹಾಕುವುದರಿಂದ ನೀರಿನಿಂದ ಸೋಂಕು ಹರಡುವುದಿಲ್ಲ. ಇದನ್ನು ವಿಶ್ವ ಆರೋಗ್ಯ ಸಂಸ್ಥೆಯು ದೃಢಪಡಿಸಿದೆ ಎಂದು ತಿಳಿಸಿದರು.