ಜಿಲ್ಲೆ

ನೀರಿನ ಸಮಸ್ಯೆ ಉಲ್ಬಣಿಸದಿರಲಿ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಹೊಸಕೋಟೆ: ರಾಜ್ಯದ ಬರಪೀಡಿತ ತಾಲೂಕುಗಳಲ್ಲಿ ಹೊಸಕೋಟೆಯೂ ಒಂದಾಗಿದ್ದು, ಹರಿಯುವ ನೀರಿನ ಮೂಲಗಳಿಲ್ಲದೆ ಬರೀ ಕೊಳವೆಬಾವಿಗಳನ್ನು ನಂಬಿ ಜೀವಿಸಬೇಕಿದೆ. ನೀರಿನ ಸಮಸ್ಯೆ ಬಗೆಹರಿಸಲು ತಾಲೂಕಿನಲ್ಲಿ ಹೆಚ್ಚಿನ ಕೊಳವೆ ಬಾವಿಗಳನ್ನು ಕೊರೆಸುವ ಅವಶ್ಯಕತೆ ಇದೆ ಎಂದು ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು.

ತಾಲೂಕು ಕಚೇರಿಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಟಾಸ್ಕ್​ ಪೋರ್ಸ್​ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಹೊಸಕೋಟೆ ತಾಲೂಕನ್ನು 2023&24ನೇ ಸಾಲಿನಲ್ಲಿ ಬರಪೀಡಿತ ತಾಲೂಕು ಎಂದು ಘೋಷಿಸಲಾಗಿದ್ದು, ವಾಡಿಕೆಯಂತೆ ಪ್ರತಿ ವರ್ಷ ಸುಮಾರು 2.4 ಟಿಎಂಸಿ ಮಳೆ ನೀರು ಸಂಗ್ರವಾದರೆ ಅದರಲ್ಲಿ 1.8 ರಷ್ಟು ನೀರು ಭೂಮಿಯಲ್ಲಿ ಇಂಗಿದರೆ ಇನ್ನುಳಿದ ನೀರು ಕೆರೆ&ಕುಂಟೆಗಳಲ್ಲಿ ಸಂಗ್ರಹ ಹಾಗೂ ಪಕ್ಕದ ಪ್ರದೇಶಕ್ಕೆ ಹರಿಯುತ್ತದೆ. ಈ ಮಧ್ಯೆ ತಾಲೂಕಿನ ಕೈಗಾರಿಕೆಗಳಿಗೆ ಪ್ರತಿ ವರ್ಷ 3 ಟಿಎಂಸಿ ನೀರು ಬೇಕು. ಹಾಗಾಗಿ ಕೃಷಿ ಹಾಗೂ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನೇ ತಾಲೂಕು ಅವಲಂಬಿಸಿದೆ ಎಂದರು.

ಜೆಜೆಎಂ ಕಳಪೆ ಸಲ್ಲ

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಕೇಂದ್ರದ ಜಲ್​ ಜೀವನ್​ ಯೋಜನೆ ಜಾರಿಯಲ್ಲಿದರೂ ಹಲವು ಗ್ರಾಮಗಳಲ್ಲಿ ಇಂದಿಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಅದರಲ್ಲೂ ಕಳಪೆ ಕಾಮಗಾರಿಯಿಂದ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಗುತ್ತಿಗೆದಾರರು ಸೂಕ್ತ ರೀತಿಯಲ್ಲಿ ಅಧಿಕಾರಿಗಳಿಗೆ ಸ್ಪಂದಿಸುತಿಲ್ಲ. ಪರಿಣಾಮ ಜೆಜೆಎಂನ ಹಲವು ಕಾಮಗಾರಿಗಳು ಕುಂಠಿತಗೊಂಡಿದ್ದು, ಅಧಿಕಾರಿಗಳು, ಗುತ್ತಿಗೆದಾರರು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದು ಶಾಸಕ ಶರತ್​ ಬಚ್ಚೇಗೌಡ ಹೇಳಿದರು.

ಅನುದಾನ ಕೊಡಿ

ಪ್ರತಿ ನಗರಸಭೆಗೆ ಪ್ರತಿ ವರ್ಷ 20 ಕೊಳವೆ ಬಾವಿ ಕೊರೆಸಲು ಅವಕಾಶ ಇದ್ದು, ಹೊಸಕೋಟೆ ನಗರ ಪ್ರದೇಶದಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 6 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ನಗರಸಭೆ ಕೂಡಲೇ ಆ ಕೊಳವೆ ಬಾವಿಗಳನ್ನು ತನ್ನ ಸುಪರ್ದಿಗೆ ಪಡೆಯಬೇಕು. ಇನ್ನುಳಿದ ಕೊಳವೆ ಬಾವಿ ಕೊರೆಸಲು ಜಿಲ್ಲಾಧಿಕಾರಿಗಳು ಅನುದಾನ ಬಿಡುಗಡೆ ಮಾಡಬೇಕು. ಈನ ಸಂಬಂಧ ಪತ್ರ ವ್ಯವಹಾರ ಪೂರ್ಣಗೊಳಿಸಲು ನಗರಾಯುಕ್ತರಿಗೆ ಶಾಸಕ ಶರತ್​ ಬಚ್ಚೇಗೌಡ ಸೂಚಿಸಿದರು.

ಡಿಪಿಆರ್​ ತಯಾರಿಸಿ

ಕುಡಿಯುವ ನೀರಿನ ಸಮಸ್ಯೆ ಆಗದಂತೆ ಸರ್ಕಾರ ನೀಡಿರುವ ಯೋಜನೆಗಳ ಪಟ್ಟಿ ಸಿದ್ಧಪಡಿಸಿ, ಯೋಜನೆ ಜಾರಿಗೆ ಬೇಕಾದ ಹಣ ಬಿಡುಗಡೆಗೆ ಡಿಪಿಆರ್​ ತಯಾರಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಸವರಾಜು ನಿರ್ದೇಶಿಸಿದರು. ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಜೆಜೆಎಮ್​ ಯೋಜನೆಯಡಿ ತಾಲೂಕಿನಲ್ಲಿ ಇನ್ನೂ 21 ಕೊಳವೆ ಬಾವಿಗಳನ್ನು ಕೊರೆಸಬೇಕಿದೆ. ಅಮೃತ್​ ಯೋಜನೆಯಡಿ ಎಲ್ಲ ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು, ಅವಶ್ಯಕತೆ ಬಿದ್ದರೆ ಸದರಿ ಯೋಜನಡಯಡಿ ಹೆಚ್ಚುವರಿ ಕೊವೆ ಬಾವಿ ಕೊರೆಸಲು ಜಿಲ್ಲಾಧಿಕಾರಿಗಳು ಅನುದಾನ ಬಿಡುಗಡೆಗೆ ಕೊರಲಾಗಿದೆ.

- ಶರತ್​ ಬಚ್ಚೇಗೌಡ ಶಾಸಕ