ಜಿಲ್ಲೆ

ನಮ್ಮ ಮೂಲ ಬೇರು ಮರೆಯಾಗದಿರಲಿ: ವಿಶ್ರಾಂತ ಕುಲಪತಿ ಡಾ.ಪದ್ಮಾ ಶೇಖರ್ ಸಲಹೆ

ಮೈಸೂರು: ಬದುಕಿಗೆ ಕೆಲಸ ಅರಸುತ್ತಾ ಎಲ್ಲೇ ಹೋದರೂ ನಮ್ಮ ಮೂಲ ಬೇರು ಮರೆಯಬಾರದು ಎಂದು ವಿಶ್ರಾಂತ ಕುಲಪತಿ ಡಾ.ಪದ್ಮಾ ಶೇಖರ್ ಹೇಳಿದರು.

ನಾಗಮಂಗಲ ತಾಲೂಕು ಮೈಸೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಲೇಖಕ ಡಾ.ನೀ.ಗೂ.ರಮೇಶ್ ಅವರು ಸಂಪಾದಿಸಿದ ‘ನಾಗಮಂಗಲ ನೆಲಪ್ರಜ್ಞೆ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಜಗತ್ತು ವಿಶಾಲವಾಗುತ್ತಿರುವಂತೆ ಉದ್ಯೋಗವಕಾಶಗಳಿಗಾಗಿ ಹುಟ್ಟೂರು, ಜಿಲ್ಲೆ, ರಾಜ್ಯ ಬಿಟ್ಟು ಎಲ್ಲಿಗೋ ಹೋಗಿ ಜೀವನ ಕಟ್ಟಿಕೊಳ್ಳ್ಳುತ್ತೇವೆ. ಆದರೆ, ಹುಟ್ಟೂರಿನ ಸೆಳೆತ ನಮ್ಮನ್ನು ಕಾಡುತ್ತಲೇ ಇರುತ್ತದೆ. ಅಲ್ಲಿಯ ಸಂಸ್ಕೃತಿ, ಪರಂಪರೆ ಕಾಡುತ್ತವೆ. ಅಂತಹ ಪ್ರೀತಿ ಇಟ್ಟುಕೊಂಡು ಸ್ಥಾಪನೆಗೊಂಡಿರುವ ಮೈಸೂರಿನಲ್ಲಿ ಇರುವ ನಾಗಮಂಗಲ ತಾಲೂಕು ಸಂಘ, ನಾವು, ನಮ್ಮವರು ಎನ್ನುವ ಭಾವನೆಯನ್ನು ಮೂಡಿಸುತ್ತದೆ ಎಂದರು.

ಪುರಾತನ, ಐತಿಹಾಸಿಕವಾಗಿರುವ ನಾಗಮಂಗಲದ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಇನ್ನಷ್ಟು ಬರವಣಿಗೆ ಕಾರ್ಯ ಆಗಬೇಕು. ಎಲ್ಲ ರಂಗದಲ್ಲಿಯೂ ಇರುವ ಪ್ರಸಿದ್ಧರಾದವರು ನಾಗಮಂಗಲ ತಾಲೂಕಿನಲ್ಲಿ ಇದ್ದಾರೆ. ಅವರ ಕುರಿತು ಮಾಹಿತಿ ದಾಖಲಿಸುವ ಕಾರ್ಯ ಆಗಬೇಕು. ಇದು ಇತರರಿಗೆ ಸ್ಫೂರ್ತಿ ಆಗಲಿದೆ ಎಂದು ಹೇಳಿದರು.

ವಿಶ್ರಾಂತ ಪ್ರಾಂಶುಪಾಲೆ ಪ್ರೊ.ಸ.ನ.ಗಾಯತ್ರಿ ಮಾತನಾಡಿ, ರಾಜರ ಕಾಲದಲ್ಲಿಯೂ ತನ್ನದೇ ಆದ ಇತಿಹಾಸವನ್ನು ಉಳಿಸಿಕೊಂಡಿರುವ ನಾಗಮಂಗಲ ತಾಲೂಕು ಮಂಡ್ಯ ಜಿಲ್ಲೆಯ ಬೆನ್ನೆಲುಬು ಇದ್ದಂತೆ. ಇಲ್ಲಿ ರಾಜಕೀಯ, ಕಲೆ, ಸಾಹಿತ್ಯ, ಚಿತ್ರರಂಗ, ಸಂಸ್ಕೃತಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದವರು ಇದ್ದಾರೆ. ಅವರೆಲ್ಲ ಒಟ್ಟಿಗೆ ಸೇರಲು ಸಂಘಟನೆ ಮಾಡಿಕೊಂಡಿರುವುದು ಆಪ್ತತೆಯನ್ನು ನೀಡುತ್ತದೆ ಎಂದು ಬಣ್ಣಿಸಿದರು.

ಸನ್ಮಾನ ಸ್ವೀಕರಿಸಿದ ಜಾನಪದ ಸಂಶೋಧಕ ವ.ನಂ.ಶಿವರಾಮು ಮಾತನಾಡಿ, ಕಲಿಕೆ ಎನ್ನುವುದು ನಿರಂತರವಾಗಿ ಇರಬೇಕು, ದೊಡ್ಡವರು, ಚಿಕ್ಕವರು ಎನ್ನದೆ ಎಲ್ಲರಿಂದಲೂ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳುತ್ತಾ ಹೋದರೆ ಕಲಿಕೆಯ ಜ್ಞಾನ ವಿಸ್ತಾರವಾಗುತ್ತಾ ಹೋಗುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ಇದನ್ನು ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.

ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಸಂಘದ ಅಧ್ಯಕ್ಷ ವಿಶ್ವಮಂಜುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಟಿ.ಬಿ.ಜಯರಾಮು, ಕೃತಿ ಸಂಪಾದಕ ಡಾ.ನೀ.ಗೂ.ರಮೇಶ್, ಡಿವೈಎಸ್‌ಪಿ ಲಕ್ಷ್ಮೇಗೌಡ ಇತರರು ಇದ್ದರು.

ಜಾನಪದ ಸಂಶೋಧಕರ ವ.ನಂ.ಶಿವರಾಮು, ನಿವೃತ್ತ ಬ್ಯಾಂಕ್ ಉದ್ಯೋಗಿ ಎಂ.ರಾಮಚಂದ್ರ, ತೋಟಗಾರಿಕೆ ಇಲಾಖೆಯ ಜೆ.ಶಿವರಾಮಯ್ಯ, ಶಿಕ್ಷಣ ಇಲಾಖೆಯ ಟಿ.ಲಕ್ಷ್ಮಣಗೌಡ ಅವರನ್ನು ಸನ್ಮಾನಿಸಲಾಯಿತು.

ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ಜೆ.ಶ್ರವಂತ್‌ಗೌಡ, ಎಸ್.ಮೇಘನಾ, ಎಂ.ಯೋಗನಾ, ಕೆ.ಪೂರ್ವಿಕಾಗೌಡ, ಪಿಯುಸಿಯಲ್ಲಿ ಸಾಧನೆ ಮಾಡಿದ ಎನ್.ಆರ್.ತೇಜಸ್ವಿ ಪ್ರಭು, ಎನ್.ಹರ್ಷಿತ್‌ರಾಜ್, ಎ.ಸಪ್ತಶ್ರೀ, ಕೆ.ಗೌರವ್ ಅವರನ್ನು ಪುರಸ್ಕರಿಸಲಾಯಿತು.