ಗೋಕರ್ಣ: ಇಂದು ವ್ಯಾಪಕವಾಗಿ ನಮ್ಮ ಸ್ವಭಾಷೆ ಕನ್ನಡದಲ್ಲಿ ಬಹು ಬಳಕೆಯಲ್ಲಿರುವ ಅನೇಕ ಆಂಗ್ಲ ಪದಗಳಿಗೆ ಪರ್ಯಾಯ ಅಚ್ಚಗನ್ನಡ ಶಬ್ದಗಳೇ ಇಲ್ಲ ಎಂಬ ಭ್ರಮೆ ಸಾರ್ವತ್ರಿಕವಾಗಿ ಕಾಣಬರುತ್ತಿದೆ. ಆದರೆ, ಎಂತಹ ಆಂಗ್ಲ ಪದಕ್ಕೂ ಸರ್ವ ಸಮರ್ಥವಾದ ಸಮಾನಾರ್ಥವನ್ನು ಕೊಡಬಲ್ಲ ಶಕ್ತಿ ನಮ್ಮ ಕನ್ನಡ ಸ್ವಭಾಷೆಗಿದೆ. ಇದನ್ನು ಅನ್ವರ್ಥಕ ಪದ ಅನ್ವೇಷಣೆ ಮೂಲಕ ಕನ್ನಡಾಂಬೆಯ ಸಂತೋಷಕ್ಕೆ ಕಾರಣರಾಗಬೇಕು ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಕರೆಯಿತ್ತರು.
ಇಲ್ಲಿನ ಅಶೋಕೆಯಲ್ಲಿ 32ನೇ ಚಾತುರ್ವಸ್ಯದ 40ನೇ ದಿನವಾದ ಸೋಮವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಇಲ್ಲಿದೆ ಉದಾಹರಣೆ: ಇದು ಚರವಾಣಿ ಅಥವಾ ಜಂಗಮವಾಣಿಯ ಯುಗ ಕಾಲವಾಗಿದೆ. ಸಾಮಾನ್ಯರ ಬದುಕಿನ ಜೊತೆಗೆ ಅವಿಭಾಜ್ಯ ಸಹಬಾಳ್ವೆಗೆ ಕಾರಣವಾಗಿರುವ ಚರವಾಣಿಯಲ್ಲಿ ಅತ್ಯಂತ ಗರಿಷ್ಟ ಮಟ್ಟದಲ್ಲಿ ಆಂಗ್ಲ ಪದಗಳು ವಿಜೃಂಭಿಸುತ್ತಿರುವುದನ್ನು ನೋಡುತ್ತಿದ್ದೇವೆ. ಈ ಶಬ್ದಗಳಿಗೆ ಕನ್ನಡದ ಪರ್ಯಾಯ ಸುಂದರ ಪದಗಳು ಸಾಧ್ಯ ಎನ್ನುವುದಕ್ಕೆ ಸೋಮವಾರದ ಪದ ತ್ಯಾಜ್ಯ ಅಭಿಯಾನದ ಸ್ಕ್ರೀನ್ ಶಾಟ್ ಅಥವಾ ಸ್ಕ್ರೀನ್ಗ್ರಾಫ್ ಉದಾಹರಣೆ. ಸ್ಕ್ರೀನ್ಶಾಟ್ ಜಾಗದಲ್ಲಿ ತೆರೆಯ ಚಿತ್ರವನ್ನು ಸೆರೆ ಹಿಡಿಯುವ ಅರ್ಥವನ್ನು ಕೊಡಬಲ್ಲ ತೆರೆ-ಸೆರೆ ಚಾಲ್ತಿಗೆ ತರಬಹುದಾಗಿದೆ. ಇದರ ಜೊತೆಗೆ ತೆರೆ-ಅಚ್ಚು, ತೆರೆ-ಚಿತ್ರ, ಪರದೆ-ಚಿತ್ರ ಇತ್ಯಾದಿ ಸರಳ ಉಚ್ಚಾರಣೆ ಮತ್ತು ಸುಲಭ ಬಳಕೆಗೆ ಬರಬಲ್ಲ ಶುದ್ಧ ಕನ್ನಡದ ಪದಗಳನ್ನು ಸಾರ್ವಜನಿಕಗೊಳಿಸಿ, ಪರಕೀಯ ಆಂಗ್ಲ ಪದಕ್ಕೆ ವಿದಾಯ ಹೇಳುವಂತೆ ಸೂಚಿಸಿ ಶ್ರೀಗಳು ಆಶೀರ್ವಾದವನ್ನಿತ್ತರು.
ಧರ್ಮಸಭೆಯಲ್ಲಿ ಗೋವಾದಲ್ಲಿ ಬಹುಶಿಷ್ಯ ವೃಂದವನ್ನು ಪಡೆದಿರುವ ಶ್ರೀ ಶಿವದತ್ತನಾಥ ಮಹಾರಾಜ್ ತಮ್ಮ ಶಿಷ್ಯರೊಡಗೂಡಿ ಶ್ರೀ ಗಳಿಂದ ಫಲ ಮಂತ್ರಾಕ್ಷತೆ ಸಹಿತ ಆಶೀರ್ವಾದ ಪಡೆದರು. ಪುರಾತನ ಶ್ರೀ ಮಲ್ಲಿಕಾರ್ಜುನ ದೇವರ ದರ್ಶನ ಪಡೆದ ಶ್ರೀ ಶಿವದತ್ತನಾಥ ಮಹಾರಾಜ್ ಚಾತುರ್ವಸ್ಯ ನಿಮಿತ್ತ ನಡೆಯುತ್ತಿರುವ ಸಂಹಿತಾ ಮಹಾಯಾಗದಲ್ಲಿ ಭಾಗಿಗಳಾದರು.
ಸೋಮವಾರ ಸಾಗರದ ಎನ್.ಎನ್. ಶ್ರೀಧರ ಕುಟುಂಬದವರಿಂದ ಶ್ರೀಗಳಿಗೆ ಸರ್ವಸೇವೆ ಸಮರ್ಪಿತವಾಯಿತು. ಗುಡಿಗಾರ ಸಮಾಜದವರಿಂದ ಸ್ವರ್ಣಪಾದುಕಾ ಸೇವೆ ನೆರವೇರಿತು. ಧರ್ಮಸಭೆಯಲ್ಲಿ ಋಗ್ವೇದ ಪರಾಯಣ ಕೈಗೊಂಡ ವೇ. ನಾಗನರಸಿಂಹ ಭಟ್ಟ ಅವರನ್ನು ಶ್ರೀಗಳು ಸನ್ಮಾನಿಸಿದರು. ಚಾತುರ್ವಸ್ಯ ವೃಂದದ ಶ್ರೀಕಾಂತ ಪಂಡಿತ, ಅರವಿಂದ ಧರ್ಬೆ, ಆಡಳಿತಾಧಿಕಾರಿ ಡಾ. ಪ್ರಸನ್ನಕುಮಾರ, ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಶ್ರೀಮಠದ ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಕಾರ್ಯದರ್ಶಿ ಮಧು ಜಿ.ಕೆ., ಸರ್ವ ಸಮಾಜ ಸಂಯೋಜಕ ಕೆ.ಎನ್. ಹೆಗಡೆ, ವಾಸುದೇವ ಶೆಟ್ಟರು, ದೇವಿದಾಸ ಶೆಟ್ಟರು, ನಂದು ಶೆಟ್ಟರು ಪಾಲ್ಗೊಂಡರು.