ಮುಧೋಳ: ಜೀವನದುದ್ದಕ್ಕೂ ರೈತಪರ ಹೋರಾಟದಲ್ಲಿ ತೊಡಗಿ ರೈತರಿಗೆ ನ್ಯಾಯ ಕೊಡಿಸುವಲ್ಲಿ ಮುಂದಾಳತ್ವ ವಹಿಸುತ್ತಿದ್ದ ದಿ. ರಮೇಶ ಗಡದನ್ನವರ ಮೂರ್ತಿಯನ್ನು ಸ್ವಂತ ಹಣದಿಂದ ನಿರ್ಮಿಸಿ ಕೊಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ತಾಲೂಕಿನ ಶಿರೋಳದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ಮುಧೋಳದ ರಮೇಶ ಗಡದನ್ನವರ ವೃತ್ತದಲ್ಲಿ ಶೀಘ್ರ 9 ಅಡಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ನೆರವೇರಿಸಲಾಗುವುದು. ಮೂರ್ತಿ ನಿರ್ಮಾಣದ ಕಾರ್ಯವನ್ನು ನಾನೇ ಮುತುವರ್ಜಿಯಿಂದ ಮುಂದಾಳತ್ವ ವಹಿಸಿಕೊಳ್ಳುತ್ತೇನೆ. ನಾವೆಲ್ಲರೂ ಸೇರಿ ರೈತ ಹೋರಾಟಗಾರನ ನೆನಪು ಅಜರಾಮರವಾಗಿಸೋಣ ಎಂದು ತಿಳಿಸಿದರು.
ಶಿರೋಳದ ನೂತನ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಕೂಡಲೇ 30 ಲಕ್ಷ ರೂ. ಮಂಜೂರು ಮಾಡುವುದಲ್ಲದೆ ಮುಂದೆ ಮತ್ತಷ್ಟು ಹಣ ನೀಡುವುದಾಗಿ ಭರವಸೆ ನೀಡಿದರು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ಶಾಲೆ ಅಥವಾ ಕಾಲೇಜು ಮಂಜೂರಿಗೆ ಕ್ರಮ ಕೈಗೊಳ್ಳಲಾಗುವುದು. ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನದ 24 ಗಂಟೆಗಳ ಕಾಲ ಸೇವೆ ದೊರೆಯುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸಿಬ್ಬಂದಿ ಕೊರತೆ ನೀಗಿಸುವ ಭರವಸೆ ನೀಡಿದರು.
ಅಂಗನವಾಡಿ ಕೇಂದ್ರದ ಬಳಿಯ ಓವರ್ ಹೆಡ್ ಟ್ಯಾಂಕ್ ಶಿಥಿಲಾವಸ್ಥೆಯಲ್ಲಿದ್ದು, ಕೂಡಲೇ ಹೊಸ ಟ್ಯಾಂಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೆ ಟ್ಯಾಂಕ್ ಸುತ್ತ ಯಾರೂ ತೆರಳದಂತೆ ನೋಡಿಕೊಳ್ಳಬೇಕು. ಉರ್ದು ಶಾಲೆ ಕೊಠಡಿಗಳ ಮೇಲ್ಛಾವಣಿ ಸೋರುತ್ತಿದ್ದು, ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಪಿಂಚಣಿ ಆದೇಶ ಪತ್ರ ವಿತರಣೆ: ಸಭೆಯಲ್ಲಿ ಗ್ರಾಮದ ಏಳು ಲಾನುಭವಿಗಳಿಗೆ ಸಾಂಕೇತಿಕವಾಗಿ ಪಿಂಚಣಿ ಆದೇಶ ಪ್ರಮಾಣ ಪತ್ರ ವಿತರಿಸಲಾಯಿತು. ಹಿಂದಿನ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಹಿಡಿಯದ ಕಾರಣ ಇಂದು ನಮಗೆ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಹಲವಾರು ಜಲಾಶಯದಲ್ಲಿ ನೀರಿನ ಪ್ರಮಾಣ ತಗ್ಗಿ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದೆ. ಪ್ರತಿ ಯೂನಿಟ್‌ಗೆ 10 ರೂ. ವ್ಯಯಿಸಿ ವಿದ್ಯುತ್ ಖರೀದಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಆದರೂ ರೈತರಿಗೆ ಗುಣಮಟ್ಟದ ವಿದ್ಯುತ್ ನೀಡುವುದೇ ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಇದೇ ವೇಳೆ ವಿವಿಧ ಮುಖಂಡರು ತಮ್ಮನ್ನು ಸನ್ಮಾನಿಸಲು ಮುಂದೆ ಬಂದಾಗ ಅದನ್ನು ವಿನಯದಿಂದ ತಿರಸ್ಕರಿಸಿದ ಸಚಿವ ತಿಮ್ಮಾಪುರ, ಮೊದಲು ಗ್ರಾಮದ ಅಭಿವೃದ್ಧಿಪರ ಕೆಲಸಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳೊಣ ಎಂದರು.
ಶಿರೋಳ ಗ್ರಾಪಂ ಅಧ್ಯಕ್ಷೆ ಶಾಯವ್ವ ಕಡಕೋಳ, ಬಸವಂತ ಕಾಂಬಳೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ತಹಸೀಲ್ದಾರ್ ವಿನೋದ ಹತ್ತಳ್ಳಿ, ತಾಪಂ ಇಒ ಸಂಜೀವ ಹಿಪ್ಪರಗಿ, ಟಿ.ಎಚ್.ಒ ಡಾ. ವೆಂಕಟೇಶ ಮಲಘಾಣ, ಗ್ರಾಪಂ ಪಿಡಿಒ ಸುಭಾಷ ಗೋಲಶೆಟ್ಟಿ ಇತರರಿದ್ದರು.