ಲಕ್ಷ್ಮೇಶ್ವರ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ತಾಲೂಕಿನ ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ತಲುಪಿಸುವ ಕೆಲಸ ಆಗಬೇಕು ಎಂದು ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಗುರುವಾರ ನಡೆದ ಪಂಚ ಗ್ಯಾರಂಟಿ ಯೋಜನೆಯ ಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬೇಕಾಗಿದೆ. ಲಕ್ಷ್ಮೇಶ್ವರದ ಬಸ್ ನಿಲ್ದಾಣದಲ್ಲಿನ ಶೌಚಗೃಹದ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಟೆಂಡರ್ ಮೊತ್ತದ ಆದೇಶದ ಪ್ರಕಾರ ಬಸ್ ನಿಲ್ದಾಣದಲ್ಲಿ ಶೌಚಗೃಹದ ಎದುರು ಕಡ್ಡಾಯವಾಗಿ ಗುತ್ತಿಗೆದಾರರು ದರಪಟ್ಟಿ ಬರೆದು ಹಾಕಬೇಕು. ಸಾರಿಗೆ ಘಟಕದಲ್ಲಿ ಸಿಬ್ಬಂದಿ ಕೊರತೆ ಸರಿಪಡಿಸಲು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚಿನ ಸಿಬ್ಬಂದಿ ಕೊಡಲು ಮನವಿ ಮಾಡಿಕೊಂಡಿದ್ದೇನೆ ಎಂದು ಹೇಳಿದರು.
ಸಂಜೆ ವೇಳೆಯಲ್ಲಿ ಹುಬ್ಬಳ್ಳಿ ಹಾಗೂ ಹಾವೇರಿ ಕಡೆಯಿಂದ ಲಕ್ಷ್ಮೇಶ್ವರಕ್ಕೆ ಬರಲು ಬಸ್‌ಗಳ ಕೊರತೆ ಇದೆ. ಘಟಕ ವ್ಯವಸ್ಥಾಪಕರು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಮತ್ತು ಲಕ್ಷ್ಮೇಶ್ವರದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಇನ್ನಷ್ಟು ಆಸನಗಳ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು. ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳು ಎಲ್ಲೆಂದರಲ್ಲಿ ನಿಲ್ಲುತ್ತಿದ್ದು, ಇದರಿಂದಾಗಿ ಪ್ರಯಾಣಿಕರು ಓಡಾಡಲು ಹಾಗೂ ಬಸ್ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಈ ಕುರಿತು ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಗ್ಯಾರಂಟಿ ಸಮಿತಿ ಸದಸ್ಯರು ಆಗ್ರಹಿಸಿದರು.
ಸಮಿತಿ ಸದಸ್ಯ ಶಿವರಾಜಗೌಡ ಪಾಟೀಲ ಗ್ರಾಮೀಣ ಭಾಗದಲ್ಲಿನ ಹಳೆಯ ವಿದ್ಯುತ್ ತಂತಿಗಳನ್ನು ಹೆಸ್ಕಾಂ ಅಧಿಕಾರಿಗಳು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ತಾಪಂ ಇಒ ಕೃಷ್ಣಪ್ಪ ಧರ್ಮರ ಮಾತನಾಡಿದರು. ಸಿಡಿಪಿಒ ಮೃತ್ಯುಂಜಯಪ್ಪ ಗುಡ್ಡದನ್ವೇರಿ, ಸಾರಿಗೆ ಘಟಕ ವ್ಯವಸ್ಥಾಪಕಿ ಸವಿತಾ ಆದಿ, ಆಹಾರ ಇಲಾಖೆ ಜಗದೀಶ ಕುರುಬರ, ಹೆಸ್ಕಾಂ ಎಇಇ ಆಂಜನೇಯಪ್ಪ, ಯುವನಿಧಿ ಅಧಿಕಾರಿ, ಸಮಿತಿ ಸದಸ್ಯರಾದ ರಂಜಾನಸಾಬ್ ನದಾಫ್, ಕೆ.ಎನ್. ರಿತ್ತಿ, ಕಲ್ಲಪ್ಪ ಗಂಗಣ್ಣವರ, ರಮೇಶ ಬಾರಕೇರ, ಶಶಿಕಲಾ ಬಡಿಗೇರ, ಹಸನ್ ಜಂಗ್ಲಿ ಇತರರಿದ್ದರು.