ಮುನವಳ್ಳಿ: ರೈತರು ಸಂಘದ ಶೂನ್ಯ ಬಡ್ಡಿ ದರ ಸಾಲ ವಿವಿಧ ಸೌಲಭ್ಯ ಪಡೆದುಕೊಳ್ಳಬೇಕು. ಜತೆಗೆ ಸಕಾಲಕ್ಕೆ ಸಾಲ ಮರುಪಾವತಿ ಮಾಡುವ ಮೂಲಕ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಪಿಕೆಪಿಎಸ್ ಅಧ್ಯಕ್ಷ ಅಂಬರೀಷ ಯಲಿಗಾರ ಹೇಳಿದರು.
ಪಟ್ಟಣದ ಮುನವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 112ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಮುಂಬರುವ ದಿನಗಳಲ್ಲಿ ಬಿಡಿಸಿಸಿ ಬ್ಯಾಂಕ್ ಸವದತ್ತಿ ಭಾಗಕ್ಕೆ ಹೆಚ್ಚಿನ ಪತ್ತು ನೀಡಬೇಕೆಂದು ಆಗ್ರಹಿಸಿದರು.
ಮುಖಂಡ ವಿರೂಪಾಕ್ಷ ಮಾಮನಿ, ಸಹಕಾರಿ ಧುರೀಣ ಉಮೇಶ ಬಾಳಿ ಮಾತನಾಡಿ, ರೈತರ ಶ್ರೇಯೋಭಿವೃದ್ಧಿಗೆ ಸಹಕಾರಿ ಸಂಘ ಬದ್ಧವಾಗಿವೆ. ಜತೆಗೆ ರೈತರ ಏಳಿಗೆಗೂ ಸಹಕಾರಿ ಸಂಘ ಪೂರಕವಾಗಿವೆ ಎಂದು ತಿಳಿಸಿದರು.
ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಅಶೋಕ ಪಟ್ಟಣಶೆಟ್ಟಿ ಸಂಘದ ವಾರ್ಷಿಕ ವರದಿ ಮಂಡಿಸಿ, ಸಂಘ 1.73 ಕೋಟಿ ರೂ. ಷೇರು ಬಂಡವಾಳ ಹೊಂದಿದ್ದು, 11 ಕೋಟಿ ರೂ. ಸಾಲ ವಿತರಿಸಿ 16.73 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು. ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ ಮಾತನಾಡಿದರು. ಬಿಡಿಸಿಸಿ ಬ್ಯಾಂಕ್‌ಗೆ ಸವದತ್ತಿ ಭಾಗದಿಂದ ಅವಿರೋಧವಾಗಿ ಆಯ್ಕೆಯಾದ ವಿರೂಪಾಕ್ಷ ಮಾಮನಿ ಹಾಗೂ ಹಿರಿಯ ದೈಹಿಕ ಶಿಕ್ಷಣ ಉಪನ್ಯಾಸಕ ಆರ್.ಎಚ್.ಪಾಟೀಲ ಸೇರಿ 60 ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಸಂಘದಿಂದ ಸನ್ಮಾನಿಸಲಾಯಿತು.
ಉಪಾಧ್ಯಕ್ಷ ವೀರಭದ್ರಗೌಡ ಪಾಟೀಲ, ನಿರ್ದೇಶಕರಾದ ರವೀಂದ್ರ ಯಲಿಗಾರ, ಕಲ್ಲಪ್ಪ ಕಿತ್ತೂರ, ಅಂದಾನೆಪ್ಪ ಗೋಮಾಡಿ, ಶಿವಲಿಂಗಯ್ಯ ಹಿರೇಮಠ, ಪ್ರಕಾಶ ಕಾಮಣ್ಣವರ, ಮೌಲಾಸಾಬ್ ಬಂಡ್ರೋಳ್ಳಿ, ಎಂ.ಬಿ.ಬಾಳಿ, ಪಂಚಪ್ಪ ಗುಂಡ್ಲೂರ, ಯಲ್ಲಪ್ಪ ಬೆರಗುಡ್ಡ, ಮಂಜು ದೊಡ್ಡಮನಿ, ಮುಖಂಡರಾದ ಎಂ.ಆರ್.ಗೋಪಶೆಟ್ಟಿ, ಎಂ.ಆರ್.ಗೋಮಾಡಿ, ಸೋಮು ಯಲಿಗಾರ, ಸುರೇಶ ಜಂಬರಿ, ಮಹಾಂತೇಶ ಕಮತಗಿ, ಉದಯ ರಾವೂಳ, ಮಹಾಂತೇಶ ಮಗೆಪ್ಪಗೋಳ, ವನಿತಾ ಹೆಬ್ಬಾಳ ಇತರರಿದ್ದರು. ಐ.ಕೆ.ಮಠಪತಿ, ಬಾಳು ಹೊಸಮನಿ ನಿರೂಪಿಸಿದರು.