ಗುಂಡ್ಲುಪೇಟೆ : ಮಹಾತ್ಮ ಗಾಂಧೀಜಿ ಜೀವನದಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿದ್ದು ಅವರ ಆಶಯದಂತೆ ಪ್ರತಿಯೊಬ್ಬರೂ ಸ್ವಚ್ಛತೆ ಕಾಪಾಡುವ ಹೊಣೆ ನಿರ್ವಹಿಸಿದಾಗ ಮಾತ್ರ ದೇಶ ಸ್ವಚ್ಛ ಮತ್ತು ಸುಂದರವಾಗಲಿದೆ ಎಂದು ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ತಳವಾರ್ ಹೇಳಿದರು.
ಪುರಸಭೆ ವತಿಯಿಂದ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸ್ವಚ್ಛತೆ ಸಂಕಲ್ಪದ ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ ಮಾತನಾಡಿ, ಸ್ವಭಾವ ಸ್ವಚ್ಛತೆ ಸಂಸ್ಕಾರ ಸ್ವಚ್ಛತೆ ಅಭಿಯಾನದಡಿ ತಾಲೂಕು ವ್ಯಾಪ್ತಿಯಲ್ಲಿ ವಿವಿಧ ರೀತಿಯ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪಟ್ಟಣದ ನಿರಂತರ ಸ್ವಚ್ಛತೆಗೆ ಪ್ರತಿಯೊಬ್ಬರೂ ಪುರಸಭೆಯೊಂದಿಗೆ ಕೈಜೋಡಿಸಿ, ಸುಂದರ ಗುಂಡ್ಲುಪೇಟೆಯನ್ನಾಗಿ ಮಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ನ್ಯಾಯಾಧೀಶರು, ವಕೀಲರು, ಪುರಸಭಾ ಸಿಬ್ಬಂದಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳೆಲ್ಲ ಸೇರಿ ಶ್ರಮದಾನ ಮಾಡಿದರು. ನಂತರ ಪುರಸಭಾ ಸಿಬ್ಬಂದಿ, ಸ್ವಯಂ ಸೇವಾ ಸಂಸ್ಥೆ ಪ್ರತಿನಿಧಿಗಳು ಸೇರಿ ಪ್ರಮುಖ ರಸ್ತೆಗಳಲ್ಲಿ ಸ್ವಚ್ಛತಾ ಘೋಷ ವಾಕ್ಯಗಳೊಂದಿಗೆ ಮೆರವಣಿಗೆ ನಡೆಸಿ ಸಾರ್ವಜನಿಕರಲ್ಲಿ ಸ್ವಚ್ಛತಾ ಅರಿವು ಮೂಡಿಸಿದರು.
ಪ್ರಧಾನ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಜೆ.ಜೆ.ಶಿವಕುಮಾರ್, ವಕೀಲರ ಸಂಘದ ಸದಸ್ಯರು, ಪುರಸಭೆ ಸದಸ್ಯರಾದ ರಮೇಶ್, ನಿರ್ಮಲಾ, ಕುಮಾರ್, ಅಣ್ಣಪ್ಪ, ಸಿಬ್ಬಂದಿ ಗೋಪಿ, ಮಹೇಶ್, ಪರಮೇಶ್ವರಪ್ಪ, ಮೂರ್ತಿ, ಸ್ವಯಂ ಸೇವಕರಾದ ತಾರಾ, ಪರಶಿವಮೂರ್ತಿ, ರೋಹಿತ್ ಹಾಗೂ ಇತರರು ಇದ್ದರು.