ಜಿಲ್ಲೆ

ನೂತನ ತಂತ್ರಜ್ಞಾನ ಆವಿಷ್ಕರಿಸಲಿ

ಪ್ರಶಾಂತ ಹೂಗಾರ

ಚಿಕ್ಕೋಡಿ: ಒಂದು ದೇಶದ ಬೆಳವಣಿಗೆಯಲ್ಲಿ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿಕ ಭಾರತದ ಕನಸನ್ನು 2047ರಲ್ಲಿ ನನಸು ಮಾಡೋಣ ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಉಪಕುಲಪತಿ ಡಾ. ಎಸ್.ವಿದ್ಯಾಶಂಕರ ಹೇಳಿದರು.

ಇಲ್ಲಿನ ಕೆಎಲ್‌ಇ ಅಭಿಯಾಂತ್ರಿಕ ಹಾಗೂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್‌ ವಿಭಾಗದ ಸಹಭಾಗಿತ್ವದೊಂದಿಗೆ ಶುಕ್ರವಾರ ಹಮ್ಮಿಕೊಂಡ ಮೂರು ದಿನಗಳ ಇನ್‌ಸ್ಟಿಟ್ಯೂಟ್ ಆಫ್ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್‌ ಅಂತಾರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿ, ದೇಶ ನಂಬರ್ 1 ಮಾಡಲು ಯುವಜನಾಂಗ ಉನ್ನತ ವ್ಯಾಸಂಗ ಕೈಗೊಂಡು, ಸಂಶೋಧನೆಯಲ್ಲಿ ನಿರತರಾಗಿ ಹೊಸ ತಂತ್ರಜ್ಞಾನ ಆವಿಷ್ಕರಿಸಬೇಕು. ತಂತ್ರಜ್ಞಾನ ಸೂಚ್ಯಾಂಕದಲ್ಲಿ ಭಾರತ 10ನೇ ಸ್ಥಾನದಲ್ಲಿದೆ. ಎಐ, ಸ್ಪೆಸ್, ಕ್ವಾಂಟಮ್, ಸೆಮಿಕಂಡಕ್ಟರ್ ತಂತ್ರಜ್ಞಾನಗಳನ್ನು ಬೆಳೆಸಬೇಕಾಗಿದೆ. ವಿಶೇಶ್ವರಯ್ಯ ವಿಶ್ವವಿದ್ಯಾಲಯದಲ್ಲಿ

ಸ್ಟಾಟ್‌ಅಪ್‌ಗಳಿಗೆ ಉಚಿತ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ. ಪ್ರಸಾದ ರಾಂಪುರೆ ಮಾತನಾಡಿ, ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ನೇತೃತ್ವದಲ್ಲಿ ಇಂದು 315 ಅಂಗಸಂಸ್ಥೆಗಳನ್ನು ಹೊಂದಿದೆ. ನಮ್ಮ ಮಹಾವಿದ್ಯಾಲಯ 17 ವಸಂತ ಪೂರೈಸಿದ್ದು, ವಿಟಿಯುದಿಂದ ಮಾದರಿ ಇಂಜಿನಿಯರಿಂಗ್ ಕಾಲೇಜು ಪ್ರಶಸ್ತಿ ಪಡೆದುಕೊಂಡಿದೆ ಎಂದರು.

ಇಸ್ಲಾಮಪುರ ಆರ್‌ಐಟಿ ಪ್ರಾಧ್ಯಾಪಕ ಡಾ. ಅಮೊಲ ಅಡಮುಟೆ, ಯುಎಸ್‌ಎ ಇಂಡಿಪೆಂಡೆಂಟ್ ರಿಸರ್ಚರ್ ಪ್ರತಾಪ ರಾಘವನ್, ವಾಷಿಂಗಟನ್ ಡಿ.ಸಿ. ಯುಎಸ್‌ಎ ರಮೇಶ ಸೋಮಯ್ಯಜುಲಾ ವಿಶೇಷ ಉಪನ್ಯಾಸ ನೀಡಿದರು.

ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್, ಕಂಪ್ಯೂಟರ್ ಸೈನ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆಂಡ್ ಡೇಟಾ ಸೈನ್ಸ್ ವಿಭಾಗದ ಹೊಸ-ಹೊಸ ತಂತ್ರಜ್ಞಾನಗಳ ಕುರಿತು ಪ್ರಬಂಧ ಮಂಡನೆ ಏರ್ಪಡಿಸಲಾಗಿತ್ತು. ಸಮಾವೇಶಕ್ಕೆ ಭಾರತ, ಇಂಗ್ಲೆಂಡ್, ಅಮೆರಿಕ, ಕೆನಡಾ ಸೇರಿ ಹಲವಾರು ದೇಶಗಳಿಂದ 1,500 ಪ್ರಬಂಧಗಳನ್ನು ಸ್ವೀಕರಿಸಲಾಗಿದ್ದು, ಅವುಗಳಲ್ಲಿ 360 ಪ್ರಬಂಧಗಳು ಆಯ್ಕೆಯಾದವು.

ಡಾ. ಮೇಘನಾ ಕುಲಕರ್ಣಿ, ಡಾ. ಕುಲದೀಪ ಸಾಂಬ್ರೆಕರ, ಡಾ. ವಿಭಾ ವ್ಯಾಸ, ಡಾ. ಸಂಜೀವ ಸನ್ನಕ್ಕಿ, ಡಾ. ದರ್ಶನಕುಮಾರ ಬಿಳ್ಳೂರ, ಕುಮಾರ ಚೌಗಲಾ, ಕಾಲೇಜು ಮುಖ್ಯಸ್ಥರಾದ ಡಾ. ಸಂಜಯ ಹನಗಂಡಿ, ಡಾ. ಸಂಜಯ ಅಂಕಲಿ, ಡಾ. ವಿರಣ್ಣ ಮೋದಿ, ಡಾ. ಜಗನ್ನಾಥ ಜಾಧವ, ಸಂಗೀತಾ ವಾಟೆಗಾಂವಕರ, ಪ್ರದೀಪ ಹೊದ್ಲೂರ, ಸುನೀಲ ಶಿಂಧೆ, ಡಾ. ಸಚಿನ ಮೆಕ್ಕಳಕಿ ಇತರರು ಇದ್ದರು. ಸಮಾವೇಶದ ಸಂಯೋಜಕ ಡಾ. ಚಂದ್ರಕಾಂತ ಉಮರಾಣಿ ಪ್ರಾಸ್ತಾವಿಕ ಮಾತನಾಡಿದರು. ಕೀರ್ತಿ ಪಾಟೀಲ ಮತ್ತು ಪ್ರವೀಣ ಫಡಿ ನಿರೂಪಿಸಿದರು. ಸಹ ಸಂಯೋಜಕ ಪ್ರೊ. ಪ್ರಶಾಂತ ಹೆಬ್ಬಾಳೆ ವಂದಿಸಿದರು.