ಜಿಲ್ಲೆ

ಉಮ್ಮಚಗಿಯಲ್ಲಿ ಅಕ್ಷರಕ್ಕೊಂದು ವೃಕ್ಷ ಬೆಳೆಸೋಣ ಬನ್ನಿ

ಬಸವರಾಜ ವೀರಪ್ಪ ಗರಗ

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಸುಮೇರು ಜ್ಯೋತಿರ್ವಿಜ್ಞಾನ ಸಂಪ್ರತಿಷ್ಠಾನ, ಸಾತ್ವಿಕ ಫೌಂಡೇಷನ್ ಹಾಗೂ ಮಂಚಿಕೇರಿ ವಲಯ ಅರಣ್ಯ ಇಲಾಖೆಗಳ ಆಶ್ರಯದಲ್ಲಿ ಸುಮೇರು ಜ್ಯೋತಿರ್ವನದಲ್ಲಿ ‘ಅಕ್ಷರಕ್ಕೊಂದು ವೃಕ್ಷ ಬೆಳೆಸೋಣ ಬನ್ನಿ’ ಕಾರ್ಯಕ್ರಮ ನಡೆಯಿತು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಜಿ.ಪಿ., ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ಡಿ. ಬಿರಾದಾರ, ಕಾರ್ಯಕ್ರಮ ಸಂಯೋಜಕ ಡಾ.ಕೆ.ಸಿ. ನಾಗೇಶ ಭಟ್ಟ ಅವರು ಅ ಅಕ್ಷರದ ಶ್ರೀಗಂಧ ಗಿಡ ನೆಡುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. 75ಕ್ಕೂ ಹೆಚ್ಚು ಜನ 50 ಅಕ್ಷರಗಳಿಗೆ ಸಂಬಂಧಿಸಿದ ಗಿಡಗಳನ್ನು ನೆಟ್ಟರು.

ನಂತರ ನಡೆದ ಸಭೆಯಲ್ಲಿ ಡಿಸಿಎಫ್ ಹರ್ಷ ಭಾನು ಮಾತನಾಡಿ, ಸನಾತನ ಧರ್ಮ, ಜಾನಪದ ನುಡಿಗಳನ್ನು ಅನುಸರಿಸಿ ಮುನ್ನಡೆದರೆ ಪ್ರಕೃತಿ ಸಂರಕ್ಷಣೆ ಸಾಧ್ಯ. ಈ ನಿಟ್ಟಿನಲ್ಲಿ ಸುಮೇರು ಜ್ಯೋತಿರ್ವನವು ಕೈಗೊಳ್ಳುತ್ತಿರುವ ಕಾರ್ಯಗಳು ಶ್ಲಾಘನೀಯ. ಎಲ್ಲರೂ ಇಂತಹ ಕಾರ್ಯಕ್ಕೆ ಸಹಕರಿಸಬೇಕು ಎಂದರು.

ಡಾ.ಬಿ.ಡಿ. ಬಿರಾದಾರ ಮಾತನಾಡಿ, ಇಂತಹ ಮೌಲ್ಯಯುತ, ಧಾರ್ವಿುಕ, ವೈಜ್ಞಾನಿಕ ಕಾರ್ಯಗಳು ಸಮಾಜಕ್ಕೆ ಬೇಕು. ನಮ್ಮ ವಿಶ್ವವಿದ್ಯಾಲಯದಲ್ಲೂ ಅಮೃತವನವನ್ನು ನಿರ್ವಿುಸುವ ಪ್ರಯತ್ನ ಮಾಡುತ್ತೇವೆ ಎಂದರು.

ಪರಿಸರ ಬರಹಗಾರ ಶಿವಾನಂದ ಕಳವೆ, ವಿಜ್ಞಾನಿ ಡಾ.ಕೇಶವ ಹೆಗಡೆ ಕೊರ್ಸೆ, ತಜ್ಞರಾದ ಪ್ರಕಾಶ ಅಡೆಮನೆ, ಪ್ರಕಾಶ ಮಂಚಾಲೆ, ಉಮಾಪತಿ ಭಟ್ಟ ಶಿರಸಿ, ರಾಮಚಂದ್ರ ಹೆಗಡೆ, ಸಂಸ್ಥೆಯ ಅಧ್ಯಕ್ಷೆ ಡಾ.ನಿವೇದಿತಾ ಭಟ್ಟ, ಇತರರಿದ್ದರು.

ಜ್ಯೋತಿರ್ವಿಜ್ಞಾನ ಗುರುಕುಲದ ವಿದ್ಯಾರ್ಥಿಗಳಾದ ಕಾರ್ತಿಕ, ಅಮೋಘ ಶರ್ವ, ಮಹೇಶ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.