ವಿಜಯಪುರ: ‘ನಮ್ಮ ನಮ್ಮ ಭಿನ್ನಾಭಿಪ್ರಾಯಗಳೇನೇ ಇರಲಿ, ಅಸಮಾಧಾನಗಳನ್ನು ಬದಿಗೊತ್ತಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸೋಣ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾರ್ಯಕರ್ತರಿಗೆ ಕರೆ ಕೊಟ್ಟರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಂಖನಾದ ಅಭಿಯಾನದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಇಬ್ಬರು ಸಚಿವರಿದ್ದ ಮಾತ್ರಕ್ಕೆ ಬಿಜೆಪಿ ಸೋಲಿಸಲಾಗಲ್ಲ. ನಾವೆಲ್ಲರೂ ಒಟ್ಟಾಗಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಸಂಕಲ್ಪ ಮಾಡೋಣ. ಬಿಜೆಪಿ ಗೆಲ್ಲಲೇಬೇಕು. ಅದಕ್ಕಾಗಿ ಚಾಲೇಂಜ್ ಮಾಡಬೇಕು. ಜಿಲ್ಲೆಯ ಎಂಟೂ ವಿಧಾನ ಸಭೆ ಕ್ಷೇತ್ರಗಳಲ್ಲಿ ಲೀಡ್ ಕೊಡಬೇಕು ಎಂದರು.
ಪಕ್ಷ, ವ್ಯಕ್ತಿಗಿಂತ ದೇಶದ ಹಿತದೃಷ್ಠಿಯಿಂದ ಹಾಗೂ ಕಳೆದ ಒಂಬತ್ತು ವರ್ಷಗಳಲ್ಲಿ ಭಾರತವನ್ನು ವಿಶ್ವಗುರುವಾಗಿಸುವ ನಿಟ್ಟಿನಲ್ಲಿ ಶ್ರಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಋಣ ತೀರಿಸಲು ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಜನ ಉತ್ಸುಕರಾಗಿದ್ದಾರೆ. ಹೀಗಾಗಿ ಕೇಂದ್ರದ ಸಾಧನೆಗಳನ್ನು ಜನರ ಮನೆ ಬಾಗಿಲಿಗೆ ತಲುವಪಿಸುವ ಕಾರ್ಯವಾಗಬೇಕಿದೆ. ಭಾರತದ ನೈಜ ಇತಿಹಾಸವನ್ನು ಜನರಿಗೆ ತಿಳಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲೆಂದೇ ಈ ಶಂಖನಾದ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನ ಯಶಸ್ವಿಗೊಳಿಸೋಣ ಎಂದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಲೋಕಸಭೆ ಚುನಾವಣೆ ಹಿನ್ನೆಲೆ ಸಾಮಾಜಿಕ ಜಾಲತಾಣಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಶಂಖನಾದ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮಹಾಭಾರತದಲ್ಲಿ ಶ್ರೀಕೃಷ್ಣ ಯುದ್ದಕ್ಕೂ ಮೊದಲು ಶಂಖನಾದ ಮೊಳಗಿಸುತ್ತಿದ್ದರು. ಅದೇ ರೀತಿ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಶಂಖನಾದ ಮೊಳಗಿಸುತ್ತಿದೆ. ಈ ಅಭಿಯಾನದ ಮೂಲಕ ಕೇಂದ್ರ ಸರ್ಕಾರದ ಮತ್ತು ಮೋದಿಯವರ ಸಾಧನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡಬೇಕೆಂದರು.
ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಜಾಲತಾಣ ವಿಭಾಗದ ಪ್ರಮುಖ ವಿಕಾಸ ಪುತ್ತೂರ, ನರೇಂದ್ರ ಮೂರ್ತಿ, ರಾಘವೇಂದ್ರ ನಾಗೂರ, ಶಂಕರ ಬಿರಾದಾರ, ಜೈಕೃಷ್ಣ ಮೂರ್ತಿ, ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ಸಂದೀಪ ಪಾಟೀಲ, ಮಳುಗೌಡ ಪಾಟೀಲ, ಶಿವರುದ್ರ ಬಾಗಲಕೋಟ, ವಿಜಯಕುಮಾರ ಜೋಷಿ ಮತ್ತಿತರರಿದ್ದರು.