ಬಾಳೆಹೊನ್ನೂರು: ಅಸಂಘಟಿತ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಛಾಯಾಗ್ರಾಹಕರಿಗೆ ಸರ್ಕಾರ ಛಾಯಾಗ್ರಾಹಕ ಅಕಾಡೆಮಿ ಸ್ಥಾಪಿಸಬೇಕು ಎಂದು ಹಿರಿಯ ಛಾಯಾಗ್ರಾಹಕ ಪ್ರವೀಣ್‌ಕುಮಾರ್ ಒತ್ತಾಯಿಸಿದರು.
ಛಾಯಾಗ್ರಾಹಕರ ಸಂಘದಿಂದ ವಿಶ್ವ ಛಾಯಾಗ್ರಾಹಕ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಛಾಯಾಗ್ರಾಹಕರನ್ನು ರಾಜ್ಯ ಸರ್ಕಾರ ಈಗಾಗಲೇ ಅಸಂಘಟಿತ ಕಾರ್ಮಿಕ ವಲಯವಾಗಿ ಗುರುತಿಸಿ ಕೆಲವೊಂದು ಯೋಜನೆಗಳನ್ನು ನೀಡಿದೆ. ಆದರೆ ಛಾಯಾಗ್ರಾಹಕರಿಗೆ ಇನ್ನೂ ಹಲವಾರು ಮೂಲ ಸೌಲಭ್ಯಗಳು ದೊರೆಯಬೇಕಾದರೆ ಛಾಯಾಗ್ರಾಹಕ ಅಕಾಡೆಮಿ ಸ್ಥಾಪಿಸಿದರೆ ಅನುಕೂಲವಾಗಲಿದೆ. ಛಾಯಾಗ್ರಾಹಕರು ಒಗ್ಗೂಡಿ ಸರ್ಕಾರದ ಗಮನ ಸೆಳೆಯಬೇಕಾಗಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಮುಂದುವರಿದ ತಂತ್ರಜ್ಞಾನಗಳಿಂದ ಛಾಯಾಗ್ರಾಹಣಕ್ಕೆ ಒತ್ತು ನೀಡುವುದು ಕಡಿಮೆಯಾಗುತ್ತಿದ್ದು, ಮೊಬೈಲ್‌ಗಳ ಮೂಲಕವೇ ಹತ್ತಾರು ಛಾಯಾಚಿತ್ರ ತೆಗೆಯುವ ಅವಕಾಶವಿದೆ. ಛಾಯಾಗ್ರಾಹಕರು ಇಂದು ವಿವಿಧ ಸಮಸ್ಯೆಗಳ ಅನುಭವಿಸುತ್ತಿದ್ದಾರೆ. ಈ ಹಿಂದೆ ಛಾಯಾಗ್ರಾಹಕರಿಗೆ ಇದ್ದ ಮಾನ್ಯತೆ ಇಂದು ಇಲ್ಲವಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ದೂರವಾಗಿ ಸದೃಢರಾಗಬೇಕಿದೆ ಎಂದರು.
ಛಾಯಾಗ್ರಾಹಕರಾದ ಚೇತನ್‌ಕುಮಾರ್, ಸುಂದರೇಶ್ ಕಡಬಗೆರೆ, ಪ್ರಶಾಂತ್, ಮೇಘರಾಜ್, ಹಿತೈಶಿ ಚೇತನ್, ಹಮೀದ್ ಮತ್ತಿತರರು ಹಾಜರಿದ್ದರು.