ಜಿಲ್ಲೆ

ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಿ

ವೀರೇಶ ಸೌದ್ರಿ

ಶಿರಸಿ: ನಗರದ 5 ಕಿ.ಮೀ. ಸುತ್ತಳತೆಯಲ್ಲಿ ಬೆಳಗಿನ ವೇಳೆ ಬಸ್‌ಗಳನ್ನು ನಿಲ್ಲಿಸುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ಇದನ್ನು ತಪ್ಪಿಸುವ ಸಲುವಾಗಿ ರಸ್ತೆ ಸಾರಿಗೆ ಸಂಸ್ಥೆ ಈ ಭಾಗಕ್ಕೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷೆ ಸುಮಾ ಉಗ್ರಾಣಕರ್ ಹೇಳಿದರು.

ನಗರದ ತಾಪಂ ಸಭಾಭವನದಲ್ಲಿ ಶುಕ್ರವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಶಿರಸಿ ಡಿಪೋದಲ್ಲಿ 15 ಲಕ್ಷ ಕಿಮೀ ಓಡಿದ ಬಸ್‌ಗಳ ಸಂಖ್ಯೆ ಜಾಸ್ತಿ ಇದೆ. ಸರ್ಕಾರ ಈಗ ಹೊಸ ಬಸ್‌ಗಳನ್ನು ನೀಡುತ್ತಿರುವುದರಿಂದ ಹೆಚ್ಚುವರಿ ಬಸ್‌ಗಳು ಲಭ್ಯವಾದಂತಾಗಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದರು.

ಪ್ರಾಧಿಕಾರದ ಸದಸ್ಯ ಪ್ರಸನ್ನ ಶೆಟ್ಟಿ ಮಾತನಾಡಿ, ಶಿರಸಿ ಬಸ್ ನಿಲ್ದಾಣದಲ್ಲಿ ಸಿಬ್ಬಂದಿ ಕೊರತೆ ಇದೆ. ಇತ್ತೀಚೆಗೆ ಮಹಿಳೆಯೊಬ್ಬಳು ವ್ಯಕ್ತಿಯೋರ್ವನಿಗೆ ಹೊಡೆದ ಪ್ರಕರಣ ರಾಜ್ಯಾದ್ಯಂತ ಜನ ನೋಡಿದ್ದಾರೆ. ಇದರಿಂದಾಗಿ ಶಿರಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬ ಬಗ್ಗೆ ವದಂತಿಗಳೂ ಹಬ್ಬಿವೆ. ರಾತ್ರಿಯ ವೇಳೆ ನಗರದ ಹಳೇ ಮತ್ತು ಹೊಸ ಬಸ್ ನಿಲ್ದಾಣದಲ್ಲಿ ಸೂಕ್ತ ಭದ್ರತಾ ಸಿಬ್ಬಂದಿ ನೇಮಿಸುವಂತೆ ಸೂಚಿಸಿದರು.

ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಸೌಜನ್ಯಯುತವಾಗಿ ವರ್ತಿಸಬೇಕು. ನಗರದ ಐದು ರಸ್ತೆ ವೃತ್ತದಲ್ಲಿ ಶುಕ್ರವಾರ ಮಹಿಳೆ ಬಸ್ ಏರುವ ಮೊದಲೇ ಚಾಲಕ ವಾಹನವನ್ನು ಹೊರಡಿಸಿದ್ದಾನೆ. ಇದರಿಂದ ಮಹಿಳೆ ಬಿದ್ದು ಗಾಯಗೊಳ್ಳುವ ಸಾಧ್ಯತೆ ಇತ್ತು. ಕೆಲ ಬಸ್ ಚಾಲಕರು ಉದ್ದೇಶಪೂರ್ವಕವಾಗಿ ಪ್ರಯಾಣಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ ಮಾತನಾಡಿದ ಸುಮಾ ಉಗ್ರಾಣಕರ್, ಬಸ್ ನಿಲ್ದಾಣಗಳಲ್ಲಿ ಶೌಚಗೃಹಕ್ಕೆ ಹೆಚ್ಚು ಶುಲ್ಕ ಆಕರಿಸದಂತೆ ಸೂಚಿಸಿದ್ದರೂ ಮತ್ತದೇ ಚಾಳಿ ಮುಂದುವರಿಸಿದ್ದಾರೆ. 1 ರೂ. ಎಂದು ಅಳವಡಿಸಲಾಗಿದ್ದ ಸೂಚನಾ ಫಲಕವನ್ನೂ ಸಹ ಈಗ ತೆಗೆದುಹಾಕಿದ್ದಾರೆ. ಈ ಬಗ್ಗೆ ಶೌಚಗೃಹ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರಿಗೆ ನೋಟಿಸ್ ನೀಡಬೇಕು ಎಂದು ಆಗ್ರಹಿಸಿದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ಚೆನ್ನಬಸಪ್ಪ ಹಾವಣಗಿ ಇದ್ದರು.