Let's end plastic pollution 
ಜಿಲ್ಲೆ

ಪ್ಲಾಸ್ಟಿಕ್ ಮಾಲಿನ್ಯ ಕೊನೆಗಾಣಿಸೋಣ

Vijayapura - Desk - Doddanagouda Gudihindin

 ಚಿಕ್ಕಪಡಸಲಗಿ: ಸುಟ್ಟರೂ ಸುಡದ ಪ್ಲಾಸ್ಟಿಕ್ ಜಗತ್ತಿನ ಅತಿದೊಡ್ಡ ಸಮಸ್ಯೆಯಾಗಿದೆ. ಮಕ್ಕಳಾದ ನೀವೆಲ್ಲರೂ ಪ್ಲಾಸ್ಲಿಕ್ ಮಾಲಿನ್ಯ ಕೊನೆಗಾಣಿಸುತ್ತೇವೆ ಎಂಬ ಪ್ರತಿಜ್ಞೆ ಮಾಡಬೇಕು ಎಂದು ಮುಖ್ಯಶಿಕ್ಷಕ ನಾರಾಯಣ ಶಾಸ್ತ್ರಿ ಹೇಳಿದರು.

ಸಮೀಪದ ಕುಂಬಾರಹಳ್ಳ ಸರ್ಕಾರಿ ಪ್ರೌಢಶಾಲೆಯಲ್ಲಿ ಚಾರ್ಲ್ಸ್‌ಡಾರ್ವಿನ್ ಇಕೋ ಕ್ಲಬ್ ಅಡಿಯಲ್ಲಿ ನಡೆದ ಪರಿಸರ ದಿನೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಪರಿಸರ ಚೆನ್ನಾಗಿದ್ದರೆ ನಾವೆಲ್ಲರೂ ಚೆನ್ನಾಗಿರಲು ಸಾಧ್ಯ. ಮರಗಳು ದೇವರು ಕೊಟ್ಟ ವರಗಳು. ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಪ್ರೀತಿಪಾತ್ರರ ಹೆಸರಿಟ್ಟು ಪೋಷಿಸಿರಿ ಎಂದು ಸಲಹೆ ನೀಡಿದರು.

ಶಿಕ್ಷಕ ಸಂಗನಬಸವ ಉಟಗಿ ಮಾತನಾಡಿ, ಇಂದು ನೀವು ಗಿಡವನ್ನು ನೆಟ್ಟರೆ ಮುಂದೊಂದು ದಿನ ಅದು ಮರವಾಗಿ ನಿಮ್ಮನ್ನು ಕೈಯಿ ಬೀಸಿ ಕರೆದು ಹಣ್ಣು ಮತ್ತು ನೆರಳು ನೀಡುತ್ತದೆ. ಮನಸ್ಸು ಪ್ರಪುಲ್ಲವಾಗಿರಲು ಹಸಿರು ಬೇಕೇ ಬೇಕು. ವಿದ್ಯಾರ್ಥಿಗಳು ಬೌದ್ಧಿಕ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ಗಳಿಸಿಕೊಳ್ಳಲು ಪರಿಸರ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಇಕೋ ಕ್ಲಬ್ ಸಂಘದ ಮಾರ್ಗದರ್ಶಿ ಆಸೀಫಾಭಾನು ಮೋಮಿನ್ ಮಾತನಾಡಿದರು. ಶಿಕ್ಷಕರಾದ ಸಂಜೀವ ಝಂಬುರೆ, ಚಂದ್ರಕಾಂತ ಪೋಲಿಸ್, ಸವಿತಾ ಬೆನಕಟ್ಟಿ, ಶಕುಂತಲಾ ಬಿರಾದಾರ ಉಪಸ್ಥಿತರಿದ್ದರು. ಶಿಕ್ಷಕಿ ಶಾರದಾ ಮಠ ಸ್ವಾಗತಿಸಿ, ನಿರ್ವಹಿಸಿದರು.