ಚಿಕ್ಕೋಡಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಶಿಕ್ಷಕರಿಗೆ ಎದುರಾಗುತ್ತಿರುವ ಸಮಸ್ಯೆ ಪರಿಹರಿಸುವಂತೆ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಜಿ.ಪಾಟೀಲ ನೇತೃತ್ವದಲ್ಲಿ ತಹಸೀಲ್ದಾರ್ ರಾಜೇಶ ಬುರ್ಲಿ ಮೂಲಕ ಸರ್ಕಾರಕ್ಕೆ ಶುಕ್ರವಾರ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಸೆ.೨೨ರಿಂದ ಆರಂಭವಾದ ಸಮೀಕ್ಷೆಗೆ ಶಿಕ್ಷಕರನ್ನು ನಿಯೋಜಿಸಲಾಗಿದೆ. ೨೨ರಂದು ಶಿಕ್ಷಕರಿಗೆ ದಸರಾ ರಜೆ ಪ್ರಾರಂಭವಾಗಿದೆ. ಅದಾಗ್ಯೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಸಮೀಕ್ಷೆಗೆ ತೊಡಗಿಸಿಕೊಂಡು ಎಲ್ಲ ಶಿಕ್ಷಕರು ಪ್ರಾಮಾಣಿಕವಾಗಿ ಸಹಕರಿಸುತ್ತಿದ್ದಾರೆ. ಆದರೆ, ಸಮೀಕ್ಷೆ ಪ್ರಾರಂಭದಿಂದಲೂ ದಿನವೂ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದು, ಸುಗಮವಾಗಿ ನಡೆಯುತ್ತಿಲ್ಲ. ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಮನೆಗಳ ಯುಐಡಿ ನಂಬರ್ ಕಮತೇನಟ್ಟಿ ಗ್ರಾಮದಲ್ಲಿ ತೋರಿಸುತ್ತಿದ್ದು, ಸರಿಪಡಿಸಬೇಕು. ಸಮೀಕ್ಷೆಗೆ ಒಳಪಡುವವರಿಗೂ ಸಮರ್ಪಕ ದಾಖಲೆ ತೆಗೆದಿಡುವಂತೆ ಹಾಗೂ ಒಟಿಪಿ ಹೇಳುವಂತೆ ಜಾಗೃತಿ ಮೂಡಿಸುವ ಕಾರ್ಯ ಸ್ಥಳೀಯಾಡಳಿತದಿಂದ ಆಗಬೇಕಿದೆ. ನವಮಿ ಹಾಗೂ ವಿಜಯದಶಮಿ ಹಬ್ಬದ ದಿನದಂದು ಗಣತಿ ಕಾರ್ಯದಿಂದ ವಿನಾಯಿತಿ ನೀಡಬೇಕು. ಜತೆಗೆ ನನದಿವಾಡಿ, ಟಾಂಗ್ಯಾನಕೋಡಿಯಂಥ ಕೆಲ ಜನವಸತಿ ಪ್ರದೇಶಗಳಲ್ಲಿ ಮೊಬೈಲ್ ನೆಟವರ್ಕ್ ಇಲ್ಲ. ಹೀಗಾಗಿ ಅಲ್ಲಿನ ತಾಂತ್ರಿಕ ಸಮಸ್ಯೆ ಬಗೆಹರಿಸಿ ಸಮೀಕ್ಷೆ ಪ್ರಾರಂಭಿಸಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಕಾರ್ಯದರ್ಶಿ ಜಿ.ಎಂ.ಕಾಂಬಳೆ, ಎಸ್.ಎ.ಖಡ್ಡ, ಆರ್.ಕೆ.ಕಾಂಬಳೆ, ಎಸ್.ಎಸ್.ದುಪದಾಳ, ಲತಾ ಯಾದಗೂಡೆ, ಪಿ.ಎಸ್.ಗುಂಡಿ, ಸುಲ್ತಾನ್ ಬೀರನ್ನವರ್, ಬಾಬಾಸಾಬ ಕುಂಬಾರ, ಎಸ್.ಎನ್.ಬೆಳಗಾವಿ, ಡಿ.ಆರ್.ಚಲವಾದಿ, ಎಸ್.ಬಿ.ಖೋತ, ಡಿ.ಎಚ್.ಕಾಂಬಳೆ, ಮಹಾವೀರ ಕಾಂಬಳೆ, ಮಹಾಂತೇಶ ನೂಲಿ, ಖಾಜಾ ಜಮಾದಾರ ಹಾಗೂ ಇತರರಿದ್ದರು.