ಜಿಲ್ಲೆ

ದೇವರ ಸ್ಮರಣೆಗೆ ಸಮಯ ಮೀಸಲಿಡಲಿ

ವೀರೇಶ ಸೌದ್ರಿ

ಮುಂಡಗೋಡ: ಮನುಷ್ಯನಾದವನು ದಿನದ 24ಗಂಟೆಯಲ್ಲಿ ಕೆಲ ಸಮಯವಾದರೂ ದೇವರನ್ನು ಸ್ಮರಿಸಿಕೊಳ್ಳಬೇಕು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಹನುಮಾಪುರ ಗ್ರಾಮದ ಕಾಳಿಕಾದೇವಿ ಮಠದ ಲಿ. ಸದಾನಂದ ಶಿವಾಚಾರ್ಯ ಸ್ವಾಮೀಜಿಯ 35ನೇ ವರ್ಷದ ಪಟ್ಟಾಭಿಷೇಕದ ವರ್ಧಂತಿ ಸ್ಮರಣೋತ್ಸವ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಧರ್ಮಸಭೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಆಧುನಿಕ ಯುಗದಲ್ಲಿ ಬಹಳಷ್ಟು ಜನರು ದೇವರ ಮೇಲೆ ನಂಬಿಕೆ ಇಟ್ಟಿದ್ದಾರೆ. ನಂಬಿಕೆ ಇಡದಿರುವ ನಾಸ್ತಿಕರಿದ್ದಾರೆ. ಕೊನೆಯ ಗಳಿಗೆಯಲ್ಲಿ ದೇವರ ಮೊರೆ ಹೋದವರೂ ಇದ್ದಾರೆ. ನಾವಾಡುವ ಉಸಿರಾಟ, ಬೆಳಕು, ಬಿಸಿಲು ದೇವರು ಕೊಟ್ಟಿದ್ದು ಎಂಬುದು ಅರಿಯಬೇಕು, ಈ ಮಾನವ ಜನ್ಮ ಅರಿವುಳ್ಳವಂತಹದ್ದು. ಗುರುವಿನ ಸ್ಮರಣೆ ಹಾಗೂ ಪುಣ್ಯದ ಕೆಲಸ ಮಾಡಬೇಕು. ನಮ್ಮ ಪರಂಪರೆ, ಆದರ್ಶಗಳನ್ನು ಮರೆಯಬಾರದು. ಧರ್ಮ, ಆಚಾರಗಳು ಬೇರೆ ಬೇರೆಯಾದರೂ ಅಂತಿಮವಾದ ಸಮಯ ಒಂದೆ ತರನಾಗಿರುತ್ತದೆ. ಜಾತಿ, ಧರ್ಮದ ದೇಶಗಳ ಹೆಸರಿನಲ್ಲಿ ಸಂಘರ್ಷಗಳು ನಡೆಯುತ್ತಿರುವುದು ಒಳ್ಳೆಯದಲ್ಲ. ಬಸವಾದಿ ಶರಣರು ತಮ್ಮ ಹಿಂದಿರುವ ಜನರಿಗೇ ಸನ್ಮಾರ್ಗ ತೋರಿದರು. ಎಲ್ಲ ಧರ್ಮಗಳಲ್ಲಿ ಗುರುವಿಗೆ ಪ್ರಥಮ ಸ್ಥಾನ ನೀಡಲಾಗುತ್ತದೆ ಎಂದರು.

ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿ, ಹನುಮಾಪುರ ಪುಣ್ಯದ ಊರು. ಹಿಂದಿನ ಸ್ವಾಮೀಜಿ ಮರಣದ ನಂತರ ಮಠಕ್ಕೆ ರಂಭಾಪುರಿ ಶ್ರೀಗಳು ಆಗಮಿಸಿದ್ದು ನಮ್ಮೆಲ್ಲರ ಪುಣ್ಯ. ಮಹಾತ್ಮರಿಂದ ನಮ್ಮ ಜೀವನ ಬದಲಾವಣೆ ಆಗುತ್ತದೆ. ಧರ್ಮದಲ್ಲಿ ನಾವೆಲ್ಲರೂ ವಿಶ್ವಾಸವಿಡೋಣ ಎಂದರು.

ವಿವಿಧ ಭಾಗಗಳಿಂದ ಆಗಮಿಸಿದ್ದ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಅತಿಕ್ರಮಣ ಹೋರಾಟಗಾರ ವೇದಿಕಯ ರವಿಂದ್ರ ನಾಯ್ಕ, ಪ್ರದೀಪ ಶೆಟ್ಟಿ, ಕೃಷ್ಣ ಹಿರಳ್ಳಿ, ಬಸವರಾಜ ಓಶಿಮಠ, ಬಸವರಾಜ ಪಾಟೀಲ ಇತರರಿದ್ದರು.