ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಳ್ಳಿ ವಲಯಕೇಂದ್ರದಲ್ಲಿ ಆಯೋಜಿಸಿದ್ದ ಗಜಪಯಣ-2025 ವೇದಿಕೆ ಕಾರ್ಯಕ್ರಮವನ್ನು ರಾಜ್ಯ ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಉದ್ಘಾಟಿಸಿದರು. ಸಚಿವ ಕೆ.ವೆಂಕಟೇಶ್, ಶಾಸಕ ಜಿ.ಡಿ.ಹರೀಶ್‌ಗೌಡ, ತನ್ವೀರ್ ಸೇಟ್ ಇತರರಿದ್ದಾರೆ. 
ಜಿಲ್ಲೆ

ಅರಣ್ಯ ಸಂರಕ್ಷಣೆಗೆ ಪಣ ತೊಡೋಣ

ವಸಂತಕುಮಾರ್ ಬಿ

ಹುಣಸೂರು: ಪರಿಸರ ಸಮತೋಲನ ಕಾಪಾಡುವುದು ಅತ್ಯಗತ್ಯವಾಗಿದ್ದು, ನಾವೆಲ್ಲರೂ ಅರಣ್ಯ ಸಂರಕ್ಷಣೆಯ ಸಂಕಲ್ಪ ಮಾಡೋಣ ಎಂದು ರಾಜ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ್ ಬಿ.ಖಂಡ್ರೆ ಕರೆ ನೀಡಿದರು.

ನಾಗರಹೊಳೆ ರಾಷ್ಟೀಯ ಉದ್ಯಾನವನದ ವೀರನಹೊಸಳ್ಳಿ ವಲಯಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಗಜಪಯಣ-2025 ಕಾರ್ಯಕ್ರಮದ ವೇದಿಕೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಗಜಪಯಣ ಎಂದರೆ ನಾಡಿನ ಹೆಮ್ಮೆಯ ದಸರಾ ಅಂಬಾರಿ ಉತ್ಸವಕ್ಕೆ ಮುನ್ನುಡಿಯಾಗಿದೆ. ದಸರಾ ಉತ್ಸವ ಮತ್ತು ಗಜಪಯಣಕ್ಕೆ ಅವಿನಾಭಾವ ಸಂಬಂಧವಿದೆ. 22 ಬಾರಿ ದಸರಾ ಮರವಣಿಗೆಯಲ್ಲಿ ಪಾಲ್ಗೊಂಡು ಈಗಾಗಲೇ 8 ಬಾರಿ ಅಂಬಾರಿ ಹೊತ್ತಿರುವ ಆನೆ ಅಭಿಮನ್ಯು ಈ ಬಾರಿಯೂ ಅಂಬಾರಿ ಹೊರಲಿದ್ದಾನೆ. ಈ ಭೂಮಿಯಲ್ಲಿ ಜನಿಸಿದ ಎಲ್ಲ ಸಂಕುಲಗಳಿಗೂ ಬದುಕುವ ಹಕ್ಕಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಪರಿಸರ ಮತ್ತು ವನ್ಯಜೀವಿಯನ್ನು ಸಂರಕ್ಷಿಸುವತ್ತ ಸಂಕಲ್ಪ ಮಾಡೋಣ ಎಂದರು.

ಹೊರರಾಜ್ಯದ ದನಗಾಹಿಗಳ ನಿಯಂತ್ರಣ: ಇತ್ತೀಚೆಗೆ ಮಲೆಮಹದೇಶ್ವರ ಬೆಟ್ಟದಲ್ಲಿ ಹುಲಿಗಳಿಗೆ ವಿಷಪ್ರಾಶನ ಮಾಡಿದ ದುರಂತ ಘಟನೆಯ ನಂತರ ರಾಜ್ಯ ಸರ್ಕಾರ ರೈತರು ಮತ್ತು ಅರಣ್ಯವಾಸಿಗಳು ಜಾನುವಾರುಗಳನ್ನು ಕಾಡಿನೊಳಗೆ ಮೇಯಿಸುವುದನ್ನು ನಿಷೇಧಿಸಿತ್ತು. ಆದರೆ ಈ ನಿಷೇಧ ಕೇವಲ ಮಲೆಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಹೊರರಾಜ್ಯದಿಂದ ಜಾನುವಾರುಗಳನ್ನು ತಂದು ಮೇಯಿಸುವ ದನಗಾಹಿಗಳು, ರೈತರಿಗೆ ಮಾತ್ರ ಅನ್ವಯವೇ ಹೊರತು ಸ್ಥಳೀಯ ರೈತರು, ಅರಣ್ಯ ವಾಸಿಗಳಿಗೆ ನಿರ್ಭಂಧವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

500 ಕೋಟಿ ರೂ.ಮೀಸಲು: ರಾಜ್ಯದಲ್ಲಿ ಪ್ರಸ್ತುತ 6395 ಆನೆಗಳಿವೆ. ಆನೆಗಳ ಮಾನವ-ವನ್ಯಜೀವಿಗಳ ಸಂಘರ್ಷ ತಪ್ಪಿಸಲು ಅನೆ ಕಂದಕ, ತಂತಿಬೇಲಿಗಳು, ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತಿದೆ. ರೈಲ್ವೆ ಬ್ಯಾರಿಕೇಡ್ ಪರಿಣಾಮಕಾರಿ ಕ್ರಮವಾಗಿದ್ದು, ರಾಜ್ಯದಲ್ಲಿ 312 ಕಿ.ಮೀ.ಉದ್ದದ ರೈಲ್ವೆ ಬ್ಯಾರೀಕೆಡ್ ಅಳವಡಿಸಬೇಕಿದ್ದು, ಈ ಪೈಕಿ 112 ಕಿ.ಮೀ.ಉದ್ದ ಅಳವಡಿಸಲಾಗಿದೆ. ಇನ್ನೂ 300 ಕೀ.ಮೀ.ಅಳವಡಿಸುವ ಉದ್ದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ 500 ಕೋಟಿ ರೂ.ಗಳನ್ನು ಮಂಜೂರು ಮಾಡಲು ಒಪ್ಪಿದ್ದಾರೆ. ಅರಣ್ಯ ಒತ್ತುವರಿ, ಅರಣ್ಯವಾಸಿಗಳ ಮೂಲಸೌಕರ್ಯಗಳ ಸಮಸ್ಯೆಗಳು ಮುಂತಾದ ಸಮಸ್ಯೆಗಳ ಕುರಿತು ಜಂಟಿ ಸಮೀಕ್ಷೆ ಮತ್ತಿತರ ಮಾರ್ಗೋಪಾಯಗಳನ್ನು ಅನುಸರಿಸಲು ಸರ್ಕಾರ ನಿರ್ಧರಿಸಿದ್ದು, ಕಂದಾಯ ಮತ್ತು ಅರಣ್ಯ ಇಲಾಖೆಗಳ ಜಂಟಿ ಸಮೀಕ್ಷೆ ನಡೆಸುವ ಕುರಿತಂತೆ ಶೀಘ್ರ ಕ್ರಮ ವಹಿಸಲಾಗುವುದು ಎಂದರು.

ವೇದಿಕೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, 4 ಶತಮಾನಗಳ ಇತಿಹಾಸವಿರುವ ದಸರಾ ಅಂಬಾರಿ ಉತ್ಸವ ನಮ್ಮೂರಿನಿಂದ ಆರಂಭಗೊಳ್ಳುವುದು ಹುಣಸೂರಿನವರಾದ ನಮ್ಮೆಲ್ಲರ ಹೆಮ್ಮೆ ಮತ್ತು ಗೌರವದ ವಿಷಯವಾಗಿದೆ. ಹುಣಸೂರು ಮತ್ತು ಪಿರಿಯಾಪಟ್ಟಣ ತಾಲೂಕಿನ ಎರಡೂ ಗಡಿಭಾಗಗಳಿಗೆ ಹೊಂದಿಕೊಂಡಂತೆ(ಪಂಚವಳ್ಳಿಯಿಂದ ವೀರನಹೊಸಳ್ಳಿಯವರೆಗೆ) ನಾಗರಹೊಳೆ ರಾಷ್ಟ್ರೀಯ ಉದ್ಯಾನವನವಿದ್ದು, ಹುಲಿ ದಾಳಿಯಂತಹ ಜೀವಹಾನಿ ಪ್ರಕರಣಗಳು ನಡೆಯುತ್ತಲೇ ಇವೆ. ಹೀಗಾಗಿ ರಾಜ್ಯ ಸರ್ಕಾರ ಬಾಕಿ ಉಳಿದಿರುವ ರೈಲ್ವೆ ಬ್ಯಾರಿಕೇಡ್‌ನೊಂದಿಗೆ ಅದಕ್ಕೆ ಮೆಷ್‌ಗಳನ್ನು ಅಳವಡಿಸುವ ಕಾರ್ಯ ಸಂಪೂರ್ಣಗೊಳಿಸಬೇಕು. ಜೀವ ಕಳೆದುಕೊಂಡ ರೈತರಿಗೆ ಪರಿಹಾರ ಮೊತ್ತ ಹೆಚ್ಚಿಸುವುದು ಸ್ವಾಗತಾರ್ಹ. ಅದರೊಂದಿಗೆ ಬೆಳೆಹಾನಿಗೂ ಪರಿಹಾರ ಧನ ಹೆಚ್ಚಿಸುವ ಅಗತ್ಯವಿದೆ. ಈ ಭಾಗದ ರೈತರು ಸಣ್ಣಸಣ್ಣ ಹಿಡುವಳಿದಾರರಾಗಿದ್ದು, ಮಾನವ-ಪ್ರಾಣಿ ಸಂಘರ್ಷದಿಂದ ಜೀವ ಮತ್ತು ಬೆಳೆ ಹಾನಿಯಾಗುತ್ತಿರುವುದು ಖೇದದ ಸಂಗತಿಯಾಗಿದೆ ಎಂದರು.

ನೋಟೀಸ್ ಕೊಡುತ್ತಿದ್ದಾರೆ: ಕಾಡಂಚಿನ ರೈತರಿಗೆ ಅರಣ್ಯ ಇಲಾಖೆ ಪದೇ ಪದೇ ನೋಟೀಸ್ ನೀಡಿ ಖಾಲಿ ಮಾಡಲು ಒತ್ತಾಯ ಹೇರುತ್ತಲೇ ಇರುತ್ತಾರೆ. ಇದು ರೈತರಿಗೆ ನೆಮ್ಮದಿ ಹಾಳು ಮಾಡುತ್ತಿದೆ. ಸರ್ಕಾರ ಅರಣ್ಯ ಮತ್ತು ಕಂದಾಯ ಇಲಾಖೆಗಳ ಭೂಮಿಯನ್ನು ಸ್ಪಷ್ಟವಾಗಿ ಸರ್ವೇ ಕಾರ್ಯ ನಡೆಸಿ ಸಮಸ್ಯೆ ಪರಿಹರಿಸಬೇಕು. ತಾಲೂಕು ಮಟ್ಟದಲ್ಲಿ ಆಯೋಜನೆಗೊಳ್ಳುವ ಅಕ್ರಮ ಸಕ್ರಮ ಸಮಿತಿ ಸಭೆಯಲ್ಲೂ ಇದೇ ಸಮಸ್ಯೆ ಮುಂದುವರೆದಿದ್ದು, ಸಾಗುವಳಿ ನೀಡಲು ಆಗುತ್ತಿಲ್ಲ. ಹಾಗಾಗಿ ಶೀಘ್ರ ಜಂಟಿ ಸರ್ವೇ ಕಾರ್ಯ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಕೋರಿದರು.

ವಸತಿ ಸೌಲಭ್ಯ ಕಲ್ಪಿಸಿ: ಕಾಡಿನಿಂದ ಹೊರಬಂದು ಪುನರ್ವಸತಿ ಕೇಂದ್ರದಲ್ಲಿರುವ ಗಿರಿಜನರಿಗೆ 20-25 ವರ್ಷಗಳ ಹಿಂದೆ ಒದಗಿಸಿದ್ದ ಮನೆಗಳು ಶಿಥಿಲಾವಸ್ಥೆ ತಲುಪಿದ್ದು, ಕುಟುಂಬಗಳೂ ದ್ವಿಗುಣಗೊಂಡಿದ್ದು ರಾಜ್ಯ ಸರ್ಕಾರ ಪುನರ್ವಸತಿ ಕೇಂದ್ರದಲ್ಲಿ ನೂತನ ವಸತಿ ಸೌಲಭ್ಯ ಕಲ್ಪಿಸಬೇಕು. ಅಲ್ಲದೆ ಪುನರ್ವಸತಿ ಕೇಂದ್ರಗಳಲ್ಲಿ ಮೂಲಸೌಕರ್ಯಗಳ ಕೊರತೆ ನೀಗಿಸಬೇಕು ಎಂದು ಕೋರಿದರು.

ಉತ್ಸವದ ಪೋಸ್ಟರ್ ಬಿಡುಗಡೆ: ಸಭೆಯಲ್ಲಿ ಈ ಬಾರಿಯ ದಸರ ಉತ್ಸವದ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಲಾಯಿತು. ಅಲ್ಲದೆ ದಸರಾ ಅಂಬಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಕುರಿತಾದ ಕಿರುಹೊತ್ತಗೆಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಇದೇ ಮೊದಲ ಬಾರಿಗೆ ಆನೆ ಕಾರ್ಯಾಚರಣೆಯಲ್ಲಿ ಮೃತಪಟ್ಟ ಅರ್ಜುನ ಅನೆ ಸ್ಮರಣಾರ್ಥ ನೀಡುವ ಅರ್ಜುನ ಪ್ರಶಸ್ತಿಗೆ ಭಾಜನರಾದ ಮತ್ತಿಗೋಡು ಆನೆ ಶಿಬಿರದ ಭೀಮ ಆನೆಯ ಮಾವುತ ಗುಂಡ ಮತ್ತು ಕಾವಾಡಿ ನಂಜುಂಡಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಅಂಬಾರಿಗೆ ಹೊರಟ ಆನೆಗಳ ಮಾವುತರು ಮತ್ತು ಕಾವಾಡಿಗಳಿಗೆ ವೀಳ್ಯದೆಲೆ ಅಡಕೆ, ತೆಂಗಿನಕಾಯಿಯಂದಿಗೆ ಸನ್ಮಾನಿಸಿ ಸಾಂಪ್ರದಾಯಿಕವಾಗಿ ಆಹ್ವಾನ ನೀಡಲಾಯಿತು.

ಅರಸು ಹುಟ್ಟೂರಿನಲ್ಲಿ ನನಗೆ ಅವಕಾಶ: ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ದಿ.ದೇವರಾಜ ಅರಸು ಕರ್ಮಭೂಮಿ ಹುಣಸೂರಿನಲ್ಲಿ ನನಗೆ ಜನತೆ ಆಶೀರ್ವಾದ ನೀಡಿದ್ದಾರೆ. ಅರಸು ಹೆಸರಿನಲ್ಲಿ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಆದರೆ ಅದರ ಫಲಾನುಭವಿಗಳ ಸಂಖ್ಯೆ ಕಡಿಮೆಯಿದ್ದು, ಅದರ ಪುನರ್‌ವಿಮರ್ಶೆ ಅಗತ್ಯವಿದೆ. ಅರಸು ಕ್ಷೇತ್ರವಾದ ಹುಣಸೂರಿನ ಅಭಿವೃದ್ಧಿಗಾಗಿ ಸರ್ಕಾರ ಹೆಚ್ಚಿನ ಗಮನಹರಿಸಬೇಕು ಎಂದು ಕೋರಿದರು.

ಮನರಂಜನಾ ಕಾರ್ಯಕ್ರಮ: ವೇದಿಕೆ ಕಾರ್ಯಕ್ರಮದಲ್ಲಿ ವೀರನಹೊಸಳ್ಳಿ ವಲಯ ವ್ಯಾಪ್ತಿಯಲ್ಲಿನ ಗಿರಿಜನ ಆಶ್ರಮ ಶಾಲೆಗಳು, ಗಿರಿಜನರು ಸೇರಿ ಆದಿವಾಸಿ ಸಾಂಪ್ರದಾಯಿಕ ಮತ್ತು ಚಲನಚಿತ್ರಗಳ ಹಾಡಿಗೆ ನೃತ್ಯ ಮಾಡುವ ಮೂಲಕ ಜನರನ್ನು ರಂಜಿಸಿದರು. ಆದಿವಾಸಿ ಪುಟಾಣಿ ಮಕ್ಕಳ ಕುಣಿತ ಎಲ್ಲರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ನಿರೀಕ್ಷೆಗೂ ಮೀರಿದ ಜನಸಾಗರ: 3-4ಸಾವಿರ ಜನರು ಸೇರುವ ನಿರೀಕ್ಷೆ ಆಯೋಜಕರಿಗಿತ್ತು. ಆದರೆ ಈ ಬಾರಿಯ ಗಜಪಯಣದಲ್ಲಿ 7-8 ಸಾವಿರ ಜನರು ಗಜಪಯಣ ವೀಕ್ಷಣೆಗೆ ಬಂದಿದ್ದರು. ಗದ್ದೆ ಬಯಲಿನಲ್ಲಿ ಅಳವಡಿಸಿದ್ದ ಜರ್ಮನ್ ಟೆಂಟ್ ತುಂಬಿ ತುಳುಕುತ್ತಿತ್ತು. ವೀರನಹೊಸಳ್ಳೀ ಗೇಟ್ ಬಳಿ ಗಜಪಯಣಕ್ಕೆ ಚಾಲನೆ ನೀಡುವ ಜಾಗದಲ್ಲಿ ಕಾಲಿಡಲೂ ಆಗದಷ್ಟು ಜನಜಂಗುಳಿ ನೆರೆದಿತ್ತು. ನಿರೀಕ್ಷಗೂ ಮೀರಿದ ಜನರು ಬಂದ ಕಾರಣ ಊಟದ ವ್ಯವಸ್ಥೆಯೂ ಅವ್ಯವಸ್ಥೆಯ ಆಗರವಾಯಿತು. ಸಾರ್ವಜನಿಕರು ಮತ್ತು ಮಾಧ್ಯಮದ ಬಹುತೇಕರಿಗೆ ಸಮರ್ಪಕವಾಗಿ ಊಟ ಸಿಗಲಿಲ್ಲ.

ಕಾಟ ಇದೆ: ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಮಾತನಾಡಿ, ಅರಣ್ಯ ಇಲಾಖೆ ಕಾಡಂಚಿನ ರೈತರಿಗೆ ಕಾಟ ಕೊಡುತ್ತಿದೆ. ತೆರವುಗೊಳಿಸಲು ನೋಟೀಸ್ ನೀಡುತ್ತಿದೆ. ಇದು ನಿಲ್ಲಬೇಕು ಎಂದಾಗ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಇಲ್ಲ ಇಲ್ಲ ಎಂದರು. ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಸಚಿವ ವೆಂಕಟೇಶ್ ಹಾಗೆ ಹೇಳಲು ಆಗೋಲ್ಲ. ಕಾಟ ಕೊಡುತ್ತಿರುವುದು ನಿಜ ಸರ್. ಇದು ಪದೇ ಪದೇ ಆಗುತ್ತಿದೆ ಎಂದು ಬೇಸರಿಸಿದರು.

ಮಿನಿ ಜಾತ್ರೆ: ವೇದಿಕೆ ಸಮಾರಂಭದ ಜಾಗದಲ್ಲಿ ಮಿನಿ ಜಾತ್ರೆಯನ್ನೇ ಕಟ್ಟಲಾಗಿತ್ತು .ಪಾನೀಪೂರಿ, ಚುರುಮುರಿ, ಬಜ್ಜಿ ಬೋಂಡ, ಮಕ್ಕಳ ಆಟಿಕೆಗಳ ಅಂಗಡಿ, ಸಿಹಿ ತಿನಿಸುಗಳು ಹೀಗೆ 20ಕ್ಕೂ ಹೆಚ್ಚು ಅಂಗಡಿಗಳು ಹಾಕಿಕೊಂಡು ಭರ್ಜರಿ ವ್ಯಾಪಾರ ಮಾಡಿದರು. ಮಕ್ಕಳು ಬಲೂನ್‌ಗಳು, ಆಟಿಕೆಗಳನ್ನು ಖರೀದಿಸಿ ಸಂಭ್ರಮಿಸಿದರು.