ಕೂಡ್ಲಿಗಿ: ವಾಲ್ಮೀಕಿ ಜಯಂತ್ಯುತ್ಸವವನ್ನು ಅದ್ದೂರಿಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ತಾಲೂಕು ಆಡಳಿತ, ತಾಪಂ ಹಾಗೂ ಪರಿಶಿಷ್ಟ ಪಂಗಡಗಳ ಇಲಾಖೆಯಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ವಾಲ್ಮೀಕಿ ಮಹರ್ಷಿ ತತ್ವಾದರ್ಶಗಳು ಜೀವನದಲ್ಲಿ ಹಾಸುಹೊಕ್ಕಾಗಬೇಕಿದೆ. ಸಮುದಾಯವು ಇತರ ಜನಾಂಗದೊಂದಿಗೆ ಶಾಂತಿ-ಸಹಬಾಳ್ವೆ ಮನೋಭಾವದಿಂದ ಜೀವಿಸಬೇಕಿದೆ. ಎಲ್ಲ ಸಮುದಾಯದಲ್ಲಿಯೂ ಆರ್ಥಿಕವಾಗಿ ಹಿಂದುಳಿದವರು ಇದ್ದಾರೆ. ಅದರಲ್ಲೂ ಪರಿಶಿಷ್ಟ ಪಂಗಡದ ಜನಾಂಗವು ತೀರ ಹಿಂದುಳಿದಿದೆ. ಶೈಕ್ಷಣಿಕ, ಸಾಮಾಜಿಕವಾಗಿ ಮುನ್ನೆಲೆಗೆ ಬರಲು ಸಮುದಾಯದ ಸಹಕಾರ ಅತಿಮುಖ್ಯ ಎಂದ ಅವರು, ವಾಲ್ಮೀಕಿ ಮಹರ್ಷಿ ಜಯಂತಿಯನ್ನು ಎಲ್ಲ ಸಮುದಾಯದ ಜನರೊಂದಿಗೆ ಅರ್ಥಪೂರ್ಣವಾಗಿ ಆಚರಿಸೋಣ. ಅವರು ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿ ಅವರು ಹಾಕಿದ ಮಾರ್ಗದಲ್ಲಿ ನಾವು ಸಾಗೋಣ ಎಂದು ತಿಳಿಸಿದರು.
ಇದೇ 17 ರಂದು ಪಟ್ಟಣದ ಎಲ್ಲೆಡೆ ಬಾಳೆಕಂಬ, ತಳಿರು ತೋರಣ ಕಟ್ಟಿ, ಸ್ವಾಗತ ಕಮಾನುಗಳ ನಿರ್ಮಿಸಿ ಸಮಾಜದ ಮಹನೀಯರ ಹೆಸರು ಇಡುವುದು, ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ, ಮೆರವಣಿಗೆ ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸುವ ಕುರಿತು ತೀರ್ಮಾನಿಸಲಾಯಿತು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಶುಕೂರ್, ಮುಖ್ಯಾಧಿಕಾರಿ ಎಂ.ಕೆ.ಮುಗಳಿ, ಸಿಪಿಐ ಸುರೇಶ್ ತಳವಾರ, ನಾಗಮಣಿ ಜಿಂಕಾಲ್, ಸೂರ್ಯಪಾಪಣ್ಣ, ಗುನ್ನಳ್ಳಿ ರಾಘವೇಂದ್ರ, ಕಾಟೇರ ಹಾಲೇಶ್, ಸಿ.ಬಿ.ಸಿದ್ದೇಶ್, ಜಿ.ಎಂ.ಬಸಣ್ಣ, ಪಾಪನಾಯಕ ಇತರರಿದ್ದರು.