ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ. ಆನಂದ ಕೆ ಅಧಿಕಾರಿಗಳ ಸಭೆ ನಡೆಸಿದರು. ಎಎಸ್‌ಪಿ ರಾಮಣ್ಣಗೌಡ ಹಟ್ಟಿ, ಎಡಿಸಿ ಸೋಮನಿಂಗ ಗೆಣ್ಣೂರ ಇದ್ದಾರೆ.  
ಜಿಲ್ಲೆ

ಸ್ವಾತಂತ್ರ್ಯ ದಿನ ಅದ್ಧೂರಿಯಾಗಿ ಆಚರಿಸೋಣ; ಜಿಲ್ಲಾಧಿಕಾರಿ ಡಾ. ಆನಂದ ಕೆ

ವಿಜಯಪುರ: ಸ್ವಾತಂತ್ರೃ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಅತ್ಯಂತ್ರ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲು ಸಕಲ ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸ್ವಾತಂತ್ರ್ಯ ದಿನಾಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನ ಆಚರಿಸಲಾಗುತ್ತಿದ್ದು, ಈಗಿನಿಂದಲೇ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಅಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಧ್ವಜಾರೋಹಣ ನೆರವೇರಿಸುವರು. ಶಿಸ್ತಿನ ಪಥಸಂಚಲನ, ಗೌರವ ವಂದನೆ, ಜಿಲ್ಲೆಯ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪೂರ್ವ ಸಿದ್ಧತೆಗಳನ್ನು ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚಿಸಿದರು.

ಆಂಬುಲೆನ್ಸ್ ಸಹಿತ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಬೇಕು. ವೇದಿಕೆ ನಿರ್ಮಾಣ ಮತ್ತು ನಿರ್ವಹಣೆ, ವೇದಿಕೆ ಅಲಂಕಾರ, ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಗಳ ಮುದ್ರಣ ಹಾಗೂ ವಿತರಣೆ, ಭದ್ರತೆ, ಕ್ರೀಡಾಂಗಣದ ಸ್ವಚ್ಛತೆ ಸೇರಿದಂತೆ ಸಿದ್ಧತಾ ಕಾರ್ಯಗಳನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಕಾರ್ಯ ಹಂಚಿಕೆ ಮಾಡಿ, ವಹಿಸಿದ ಎಲ್ಲಾ ಕಾರ್ಯಗಳನ್ನು ಸಮರ್ಪಕವಾಗಿ ಹಾಗೂ ಜವಾಬ್ದಾರಿಯುತವಾಗಿ ನಿರ್ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪ್ಲಾಸ್ಟಿಕ್ ಧ್ವಜ ಬಳಸದಂತೆ ತಿಳಿಸಿದ ಅವರು, ಜಿಲ್ಲೆಯ ಎಲ್ಲ ಕಚೇರಿಗಳಲ್ಲಿ ಅಂದು ರಾಷ್ಟ್ರ ಧ್ವಜಾರೋಹಣ ನೆರವೇರಿಸುವಂತೆಯೂ ಧ್ವಜ ಸಂಹಿತೆ ಅನುಸಾರವಾಗಿ ಧ್ವಜಾರೋಹಣ ನಿರ್ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ವಾತಂತ್ರ್ಯದ ಮುನ್ನಾದಿನ ನಗರದ ವಿವಿಧ ವೃತ್ತಗಳಲ್ಲಿ ದೀಪಾಲಂಕಾರ ಮಾಡಿ ಹಬ್ಬದ ವಾತಾವರಣ ನಿರ್ಮಿಸುವಂತಾಗಬೇಕು. ಎಲ್ಲಾ ಕಚೇರಿಗಳಲ್ಲಿ ಶ್ರಮದಾನ ಮಾಡುವ ಮೂಲಕ ಕಚೇರಿ ಆವರಣವನ್ನು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಎಲ್ಲಾ ಇಲಾಖೆ ಅಧಿಕಾರಿ, ಸಿಬ್ಬಂದಿ ಅಂದು ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಹಾಜರಾಗಬೇಕು. ಸಂಜೆ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ಆಚರಿಸುವಂತೆಯೂ, ಧ್ವಜ ಸಂಹಿತೆ ಅನ್ವಯ ಧ್ವಜಾರೋಹಣ ವ್ಯವಸ್ಥೆ ಮಾಡಿಕೊಳ್ಳಬೇಕು. ಸರ್ಕಾರಿ ಕಚೇರಿಯಲ್ಲಿ ಎಲ್ಲ ಸಿಬ್ಬಂದಿ, ಅಧಿಕಾರಿಗಳು ಹಾಜರಿರಬೇಕು ಎಂದರು.

ಎಎಸ್‌ಪಿ ರಾಮಣ್ಣಗೌಡ ಹಟ್ಟಿ, ವಿಡಿಎ ಆಯುಕ್ತ ರಾಜಶೇಖರ ಡಂಬಳ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮತ್ತಿತರರಿದ್ದರು.