ಜಿಲ್ಲೆ

ಧರ್ಮ ಜಾಗೃತಿಗಾಗಿ ಗಣೇಶೋತ್ಸವ ಆಚರಿಸಲಿ

Gadag - Desk - Tippanna Avadoot

ಲಕ್ಷ್ಮೇಶ್ವರ: ಅಂದು ಸ್ವಾತಂತ್ರೋತ್ಸವಕ್ಕಾಗಿ ಜನರನ್ನು ಸಂಘಟನೆ ಮಾಡುವ ಉದ್ದೇಶದಿಂದ ಬಾಲಗಂಗಾಧರ ತಿಲಕ್ ಅವರು ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಪ್ರಾರಂಭಿಸಿದರು, ಇಂದು ಧರ್ಮ ಜಾಗೃತಿಗಾಗಿ ಗಣೇಶೋತ್ಸವ ಆಚರಿಸುವ ಸಂಪ್ರದಾಯ ಬೆಳೆದು ಬರಬೇಕಾಗಿದೆ ಎಂದು ಗದಗ ಜಿಲ್ಲಾ ಸಾರ್ವಜನಿಕ ಗಜಾನೋತ್ಸವ ಮಹಾಮಂಡಳಿ ಅಧ್ಯಕ್ಷ ರಾಜಣ್ಣ ಮಲ್ಲಾಡದ ಅಭಿಪ್ರಾಯಪಟ್ಟರು.


ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನ ಎದುರು ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲಕ್ಷ್ಮೇಶ್ವರ ತಾಲೂಕು ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳಿ ವತಿಯಿಂದ ಗಣೇಶ ಮೂರ್ತಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಮಸೇನಾ ರಾಜ್ಯ ಕಾರ್ಯದರ್ಶಿ ರಾಜು ಖಾನಪ್ಪನವರ ಮಾತನಾಡಿ, ಲೋಕಮಾನ್ಯ ಬಾಲಗಂಗಾಧರ ತಿಲಕ ಅವರು ಜನರಲ್ಲಿ ಸ್ವಾತಂತ್ರ್ಯ ಕಿಚ್ಚನ್ನು ಹೊರಗೆಡವುದರ ಸಲುವಾಗಿ ಇದನ್ನು ಸಾಧನವಾಗಿ ಬಳಸಿಕೊಂಡರು. ಸಾರ್ವಜನಿಕ ಗಣೇಶ ಚತುರ್ಥಿ ಅಂದರೆ ಡಿಜೆಗೆ ಅಷ್ಟೇ ಸೀಮಿತವಾಗಿರಬಾರದು ಎಂದರು.

ಪಟ್ಟಣದಲ್ಲಿ ಸ್ಥಾಪಿಸಲಾಗಿದ್ದ ಗಣೇಶೋತ್ಸವ ಮಂಡಳಿಗೆ ಈ ಬಾರಿ ಸುಂದರ ಗಣೇಶ ವಿಗ್ರಹಗಳಿಗೆ ಬಹುಮಾನ ವಿತರಿಸಲಾಯಿತು. ಕೆಂಚಲಾಪುರ ಓಣಿಯ ಗಜಾನನ ಯುವಕ ಮಂಡಳಿ ಪ್ರಥಮ, ಪಿಎಸ್​ಬಿಡಿ ಶಾಲೆ ಹತ್ತಿರವಿರುವ ಈಶ್ವರ ಯುವಕ ಮಂಡಳಿ ದ್ವಿತೀಯ, ಹಳ್ಳದಕೇರಿ ಓಣಿಯ ಮಾರುತಿ ಯುವಕ ಮಂಡಳಿಗೆ ತೃತೀಯ ಬಹುಮಾನ ವಿತರಿಸಲಾಯಿತು.


ಸಾರ್ವಜನಿಕ ಗಜಾನನೋತ್ಸವ ಮಂಡಳಿ ಸಂಚಾಲಕ ಈರಣ್ಣ ಪೂಜಾರ ಹಿಂದು ಮಹಾಸಭಾ ಗಣಪತಿ ಸಂಘದ ಅಧ್ಯಕ್ಷ ಫಕೀರೇಶ ಅಣ್ಣಿಗೇರಿ, ಮಹೇಶ ಕಲಘಟಗಿ, ಮಹೇಶ ಮೇಟಿ, ಬಸವರಾಜ ಚಕ್ರಸಾಲಿ ಸೇರಿದಂತೆ ಅನೇಕ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಪಟ್ಟಣದ ಗಣೇಶ ಯುವಕ ಮಂಡಳಿ ಸದಸ್ಯರು ಇದ್ದರು.