ಹುಬ್ಬಳ್ಳಿ: ಇಂದಿನ ಕಾಲಘಟ್ಟದಲ್ಲಿ ನಮ್ಮ ಧರ್ಮ-ಸಂಸ್ಕಾರ-ಸಂಸ್ಕೃತಿ ಉಳಿಸಿಕೊಳ್ಳಬೇಕಿದೆ. ವಿಶಾಲ ಅರ್ಥದಲ್ಲಿ ಸಮಾಜ ಕಟ್ಟಬೇಕು. ಸಂಕುಚಿತ ಮನೋಭಾವಕ್ಕೆ ಅವಕಾಶ ನೀಡಬಾರದು. ಸ್ವಾಭಿಮಾನದಿಂದ ಎಲ್ಲರೂ ಬದುಕೇಕು. ಸಮಷ್ಟಿ, ಸಮನ್ವಯ ದೃಷ್ಟಿಕೋನ, ಸಾಮೂಹಿಕ ಹಿಂತ ಚಿಂತನೆ ಹೊಂದಿದಾಗ ಮಾತ್ರ ನಾವೆಲ ನಿರ್ಭಯವಾಗಿ, ಸುರಕ್ಷಿತವಾಗಿ ಬದುಕಲು ಸಾಧ್ಯ ಎಂದು ಹರಿಹರಪುರದ ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹಪೀಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ಶ್ರೀ ಭಗವತ್ಪಾದಂ ಆಧ್ಯಾತ್ಮಿಕ ಸಂಸ್ಥೆ ಮತ್ತು ಸಮಸ್ತ ಹುಬ್ಬಳ್ಳಿ ಭಕ್ತವೃಂದ ವತಿಯಿಂದ ನಗರದ ಗೋಕುಲ ಗಾರ್ಡ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಶ್ರೀಗಳ ವರ್ಧಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಭಾರತೀಯ ಸಂಸ್ಕೃತಿ ನಮ್ಮ ತಾಯಿ ಬೇರು. ಕ್ರಿಶ್ಚಿಯನ್, ಇಸ್ಲಾಂ ಧರ್ಮವು ಭಾರತೀಯ ಸಂಸ್ಕೃತಿಯಲ್ಲ. ಹಿಂದುಗಳಿಗೆ ಶ್ರದ್ಧಾ ಕೇಂದ್ರಗಳು ಭಾರತದಲ್ಲಿವೆ. ಮುಸ್ಲಿಮರ ಶ್ರದ್ಧಾ ಕೇಂದ್ರ ಮೆಕ್ಕಾ ಮತ್ತು ಮದೀನಾ. ಕ್ರಿಶ್ಚಿಯನ್‌ರಿಗೆ ಶ್ರದ್ಧಾ ಕೇಂದ್ರ ಜೆರುಸಲೆಂ. ಹಿಂದುಗಳು ತಾಯಿ ಬೇರಿಗೆ ಸಮಯಕ್ಕೆ ಸರಿಯಾಗಿ ನೀರುಣಿಸಬೇಕು. ಏಕತೆ ತಳಹದಿ, ಸಮಾನತೆ ಚೌಕ್ಕಟ್ಟು, ಸಹೋದರತ್ವ, ಪ್ರೀತಿಯಿಂದ ಬಾಳಬೇಕು. ಆಧ್ಯಾತ್ಮಿಕ ಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿವಳಿಕೆ ನೀಡಿದರು.
ಸ್ವಾಗತ ಸಮಿತಿ ಅಧ್ಯಕ್ಷ ಡಾ.ವಿ.ಎಸ್.ವಿ. ಪ್ರಸಾದ ಮಾತನಾಡಿ, ನಗರದಲ್ಲಿ ವರ್ಧಂತಿ ಮಹೋತ್ಸವವು 2018ರಲ್ಲಿ ನಡೆದಿತ್ತು. ಕನಿಷ್ಠ ಮೂರು ವರ್ಷಕ್ಕೊಮ್ಮೆ ವರ್ಧಂತಿ ಉತ್ಸವ ನಡೆಸಬೇಕಿದೆ. ಶ್ರೀಗಳ ನೇತೃತ್ವದಲ್ಲಿ ಹೋಮ-ಹವನ ನಡೆಸಿದ್ದರಿಂದ ನಗರ ಪಾವನವಾಗಿದೆ. ಎಲ್ಲರೂ ಸುಭಿಕ್ಷರಾಗಿ ಜೀವನ ನಡೆಸಲಿ ಎಂದರು.
ಕಾರ್ಯಾಧ್ಯಕ್ಷ ಸುರೇಶ ಶೇಜವಾಡಕರ ಮಾತನಾಡಿ, ಶ್ರೀಗಳ ಅನುಗ್ರಹವೇ ನಮ್ಮ ಭಾಗ್ಯ. ಅವರ ಆಶೀರ್ವಚನಗಳಿಂದ ಜನಜೀವನ ಪುನೀತವಾಗಿದೆ ಎಂದರು.
ಸಮಿತಿ ಉಪಾಧ್ಯಕ್ಷ ಅಪ್ಪಯ್ಯ ನಲತ್ವಾಡಮಠ ಮಾತನಾಡಿ, ಶ್ರೀಗಳು ಪಾದವಿಟ್ಟ ಸ್ಥಳ ಪಾವನ ತೀರ್ಥವಾಗುತ್ತದೆ. ಬುದ್ಧ ಪ್ರೇಮವನ್ನು ಶ್ರೀಗಳು ನಗರದಲ್ಲಿ ತೋರಿದ್ದಾರೆ ಎಂದರು.
ಮಂಗಳೂರಿನ ಜ್ಯೋತಿರ್ವಿಜ್ಞಾನ ಕೇಂದ್ರದ ಪ್ರಕಾಶ ಅಮನ್ನಯ್ಯ ಮಾತನಾಡಿ, ಶ್ರೀಗಳ ಅನುಗ್ರಹಕ್ಕಿಂತ ಮಿಗಿಲಾದದು ಮತ್ತೊಂದಿಲ್ಲ. ಸನಾತನ ಧರ್ಮದ ಬಗ್ಗೆ ಸಂಸತ್ತಿನಲ್ಲೇ ನಿಂದನೆ ಮಾಡಲಾಯಿತು. ಈ ಕುರಿತು ಧ್ವನಿ ಎತ್ತ ಬೇಕಿದೆ. ಅದಕ್ಕೆ ಶ್ರೀಗಳ ಬಲಬೇಕು ಎಂದರು.
ಶ್ರೀಮಠದ ಆಡಳಿತಾಧಿಕಾರಿ ಡಾ. ರವಿಶಂಕರ ಮಾತನಾಡಿ, ಶ್ರೀಗಳ 25ನೇ ಪೀಠಾರೋಹಣ ಕಾರ್ಯಕ್ರಮವು 2025ರಲ್ಲಿ ನಡೆಯಲಿದೆ. ಸನಾತನ ಹಿಂದು ಧರ್ಮ ಉಳಿಸಬೇಕೆಂದು ಶ್ರೀಗಳು ಸಾರುತ್ತಿದ್ದಾರೆ. ನಮ್ಮ ಮನಸ್ಸು ಚಂಚಲವಾಗಿರುತ್ತದೆ. ಶ್ರೀಗಳ ದರ್ಶನ ಮಾಡಿದರೆ ಪರಮೇಶ್ವರನನ್ನು ಕಂಡಂತಾಗುತ್ತದೆ. ಗುರುವಿನ ದರ್ಶನ, ಸೇವೆಯಿಂದ ಜೀವನ ಪಾವನವಾಗುತ್ತದೆ ಎಂದರು.
ಅವಧೂತ ರಮೇಶ ಗುರೂಜಿ ಪ್ರಾಸ್ತಾವಿಕವಾಗಿ ಮಾತನಾಡಿ, ನಗರದಲ್ಲಿ ಸ್ವಾಮಿಗಳ ಎರಡನೇ ಬಾರಿ ವರ್ಧಂತಿ ಮಹೋತ್ಸವ ನಡೆಸಲಾಗುತ್ತಿದೆ. ಗುರುವಿಗೆ ಆಕಾರವಿಲ್ಲ. ದೇಹ ಭಾವವಿಲ್ಲ. ಶ್ರೀಗಳ ಸಂದೇಶಗಳಲ್ಲಿನ ಒಂದನ್ನಾದರೂ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಪಾವನವಾಗುತ್ತದೆ ಎಂದರು.
ಪ್ರಮುಖರಾದ ರಘುನಾಥ ಶಾಸ್ತ್ರಿ, ರಾಜಣ್ಣ ಕೊರವಿ, ಎ.ಸಿ. ಗೋಪಾಲ, ಜಿತೇಂದ್ರ ಮಜೇಥಿಯಾ, ವಿನಾಯಕ ಆಕಳವಾಡಿ, ಉದಯ ಸಿಂಹ ಇತರರಿದ್ದರು. ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಭಕ್ತರು ಪಾಲ್ಗೊಂಡಿದ್ದರು. ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಸ್ವಾಗತಿಸಿದರು. ವೀಣಾ ಹೆಗಡೆ ನಿರೂಪಿಸಿದರು.