ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕೊಡಗಾನೂರ-ಕೊಕಟನೂರ ಗ್ರಾಮಗಳ ಮಧ್ಯದ ಪವಾರ ತೋಟದ ವಸತಿ ಬಳಿ ರಸ್ತೆ ಪಕ್ಕದ ತೆರೆದಬಾವಿ ತಡೆಗೋಡೆ ಕುಸಿದು ಬಿದ್ದಿದ್ದು, ಅದನ್ನು ಪುನರ್ ನಿರ್ಮಿಸಬೇಕು ಎಂದು ವಾಹನ ಸವಾರರು, ಪಾದಚಾರಿಗಳು ಒತ್ತಾಯಿಸಿದ್ದಾರೆ.
೫ ಕಿ.ಮೀ. ಉದ್ದದ ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ್ದಾಗಿದ್ದು, ಬಾವಿ ಸಮೀಪ ಪವಾರ, ಹಳಕಿ, ಬಣಜ, ಗಾವಡೆ, ಕರಿಹಾಜಿ, ಕಾಳಾಪಾಟೀಲ ಸೇರಿ ಹಲವರ ತೋಟದ ವಸತಿಗಳಿವೆ. ಶಾಲಾ ಮಕ್ಕಳು ಊರಿಗೆ ತೆರಳಬೇಕಾದರೆ ಬಾವಿಯತ್ತ ಇಣುಕಿ ನೋಡುವುದು ಪಾಲಕರಿಗೆ ತಲೆಬೇನೆ ತಂದಿದೆ. ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಭೀತಿ ಹುಟ್ಟಿಸಿದೆ. ಈಚೆಗೆ ಸುರಿದ ಭಾರಿ ಮಳೆಯಿಂದ ಬಾವಿಯ ಮಣ್ಣಿನ ಜತೆಗೆ ತಡೆಗೋಡೆ ಬಾವಿಯೊಳಗೆ ಕುಸಿದು ಬಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಅನಾಹುತ ಸಂಭವಿಸುವ ಮುನ್ನ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡು ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಸ್ತೆ ಪಕ್ಕದ ತೆರೆದ ಬಾವಿ ಇರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಡೆಗೋಡೆ ನಿರ್ಮಾಣ ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಲಾಗುವುದು. | ಮಲ್ಲಿಕಾರ್ಜುನ ಮಗದುಮ್ಮ ಲೋಕೋಪಯೋಗಿ ಎಇಇ ಅಥಣಿ