ವಿಜಯಪುರದ ಲೊಯೋಲಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮಹಿಳಾ ದಿನ ಕಾರ್ಯಕ್ರಮವನ್ನು ಮೇಯರ್ ಮಹೇಜಬಿನ್ ಹೊರ್ತಿ ಉದ್ಘಾಟಿಸಿದರು. ನ್ಯಾಯವಾದಿ ಮೈತ್ರೇಯಿ, ಫರ್ಜಾನಾ ಜಮಾದಾರ, ಸುಶೀಲಾ ದಳವಾಯಿ ಮತ್ತಿತರರಿದ್ದಾರೆ. 
ಜಿಲ್ಲೆ

ನೊಂದ ಹೆಣ್ಣಿನ ಧ್ವನಿಯಾಗೋಣ

ವಿಜಯಪುರ: ಮಹಿಳೆಯು ಇಂದು ಎಲ್ಲ ರಂಗಗಳಲ್ಲಿ ಸಮಾನತೆ ಸಾಧಿಸಿ ಸಾಧನೆ ಹಾದಿಯಲ್ಲಿ ಮುನ್ನುಗ್ಗುತ್ತಿದ್ದಾಳೆ. ದುರದೃಷ್ಟಕರವೆಂದರೆ ಇಂದಿನ ದಿನಗಳಲ್ಲಿಯೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲಿವೆ ಎಂದು ಹೈಕೋರ್ಟ್ ನ್ಯಾಯವಾದಿ, ಮಾನವ ಹಕ್ಕುಗಳ ಹೋರಾಟಗಾರ್ತಿ ಮೈತ್ರೇಯಿ ಕೆ. ಬೇಸರ ವ್ಯಕ್ತಪಡಿಸಿದರು.

ನಗರದ ಹೊರ ವಲಯದ ಉಕ್ಕಲಿ ರಸ್ತೆಯಲ್ಲಿರುವ ಲೊಯೋಲಾ ಪದವಿ ಪೂರ್ವ ಕಾಲೇಜಿನಲ್ಲಿ ನಗರ ಸ್ಲಂ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ ಮತ್ತು ಅನೌಪಚಾರಿಕ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ‘ಪ್ರಗತಿಯ ವೇಗವರ್ಧನೆಗೆ ಮಹಿಳೆಯರ ಮೇಲೆ ಹೂಡಿಕೆ’ ಘೋಷ ವಾಕ್ಯದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಸಂವಿಧಾನ ನಮಗೆ ನೀಡಿರುವ ಹಕ್ಕನ್ನು ಸದ್ಬಳಕೆ ಮಾಡಿಕೊಂಡು ಸಮಾನತೆ ಮತ್ತು ಭಾತೃತ್ವ ಸಂದೇಶ ಸಾರುವ ಮೂಲಕ ಹೆಣ್ಣಿನ ಮೇಲಾಗುವ ದೌರ್ಜನ್ಯದ ವಿರುದ್ಧ ಪ್ರತಿಭಟಿಸಿ, ನೊಂದ ಹೆಣ್ಣಿನ ಧ್ವನಿಯಾಗೋಣ ಎಂದು ಹೇಳಿದರು.

ಮಹಾನಗರ ಪಾಲಿಕೆ ಮೇಯರ್ ಮಹೇಜಬಿನ್ ಹೊರ್ತಿ ಕಾರ್ಯಕ್ರಮ ಉದ್ಘಾಟಿಸಿ, ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಒಳ್ಳೆಯ ಸಂಸ್ಕಾರ ನೀಡುವ ಮೂಲಕ ಅವಳನ್ನು ಸಮಾಜದಲ್ಲಿ ಗೌರವಯುತವಾಗಿ ಬಾಳುವಂತೆ ಮಾಡಬೇಕು ಎಂದರು.

ಅನೌಪಚಾರಿಕ ಶಿಕ್ಷಣ ಸಂಸ್ಥೆ ನಿರ್ದೇಶಕ ಫಾದರ್ ಟಿಯೋಲ್ ಮಚಾದೋ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ವರಿ ಮಠಪತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಸರ್ವೇಕ್ಷಣಾ ಅಧಿಕಾರಿ ಡಾ. ಕವಿತಾ ದೊಡಮನಿ ಅವರಿಗೆ ನಗರ ಸ್ಲಂ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟದಿಂದ ನೀಡುವ ‘ವಿಜಯಪುರ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಫರ್ಜಾನಾ ಜಮಾದಾರ, ಸುಶೀಲಾ ದಳವಾಯಿ, ಸಿಸ್ಟರ್ ಜಯಾ ಜಮಖಂಡಿ, ರೇಣುಕಾ ಯಂಟಮಾನ, ತೇಜಸ್ವಿನಿ ಬಂಡಿವಡ್ಡರ, ನಗರ ಯುವತಿಯರ ಒಕ್ಕೂಟ, ಅನೌಪಚಾರಿಕ ಶಿಕ್ಷಣ ಸಂಸ್ಥೆ ಸಿಬ್ಬಂದಿ ವರ್ಗ, ಮಹಿಳಾ ಒಕ್ಕೂಟದ ಪದಾಧಿಕಾರಿಗಳು, ನಗರ ಸ್ಲಂ ಹಾಗೂ ಲಂಬಾಣಿ ತಾಂಡಾಗಳ ಮಹಿಳಾ ಸ್ವ-ಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು.

ಸುಧಾ ಮಾನೆ ಸ್ವಾಗತಿಸಿದರು. ಶೋಭಾ ವಾಲಿಕಾರ ನಿರೂಪಿಸಿದರು. ರಾಧಾ ಕಾಂಬಳೆ ವಂದಿಸಿದರು.