ಹೊಸಪೇಟೆಯಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಣೆ ವಿರೋಧಿ ದಿನಾಚರಣೆಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಿಶನ್ ಬಿ. ಮಾಡಲಗಿ ಮಾತನಾಡಿದರು. 
ಜಿಲ್ಲೆ

ಮಾದಕ ವಸ್ತುಗಳ ಸೇವನೆ ತಡೆಗೆ ಕಟಿಬದ್ಧರಾಗೋಣ: ನ್ಯಾಯಾಧೀಶ ಕಿಶನ್ ಬಿ. ಮಾಡಲಗಿ ಸಲಹೆ

ಹೊಸಪೇಟೆ: ಇತ್ತೀಚಿನ ದಿನಗಳಲ್ಲಿ ಯುವ ಜನರು ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆ ತಡೆಗಟ್ಟಲು ಸಹಿಷ್ಣುತೆ ಬೆಳೆಸಿಕೊಳ್ಳಲು ಅರಿವು ಅಗತ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಿಶನ್ ಬಿ. ಮಾಡಲಗಿ ತಿಳಿಸಿದರು.

ಯುವಜನರಲ್ಲಿ ಹೆಚ್ಚು ಮಾದಕ ಸೇವನೆ

ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಹೆಚ್ಚು ಮಾದಕ ಸೇವನೆ ಕಂಡು ಬರುತ್ತಿದೆ. ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮದ ಅರಿವು ಮೂಡಿಸಿಕೊಂಡಾಗ ಅದರಿಂದ ಹೊರ ಬರಲು ಸಾಧ್ಯವಾಗಲಿದೆ ಎಂದರು.

1985ರಲ್ಲಿ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆ ನಿಷೇಧ

1985ರಲ್ಲಿ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆ ಜಾರಿಗೊಳಿಸುವ ಮೂಲಕ ಕಾನೂನು ಬದ್ಧವಾಗಿ ನಿಷೇಧಿಸಲು ಮೊದಲ ಹೆಜ್ಜೆ ಇಟ್ಟಿತು. ಮಾದಕ ವಸ್ತು ಸೇವನೆ ಕೇವಲ ಅಪರಾಧವಲ್ಲದೆ, ದೈಹಿಕ ಮತ್ತು ಮಾನಸಿಕವಾಗಿ ದುಷ್ಪರಿಣಾಮ ಬೀರುವ ಸಂಭವ ಇರುತ್ತದೆ. ಮಾದಕ ಸೇವಿಸುವವರಿಗೆ ಶಿಕ್ಷೆಯ ಜೊತೆಗೆ ಚಿಕಿತ್ಸೆ ಒದಗಿಸಿ ವ್ಯಸನ ಮುಕ್ತಗೊಳಿಸಲಾಗುತ್ತದೆ. ಯುವಜನರು ಹೆಚ್ಚು ಜಾಗೃತರಾಗಬೇಕು. ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಣೆ ತಡೆಗಟ್ಟಲು ಕಟಿಬದ್ಧರಾಗಬೇಕು ಎಂದು ಸಲಹೆ ನೀಡಿದರು.


ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಭಾಸ್ಕರ್ ಡಿ.ಮಾತನಾಡಿ, ಇತ್ತೀಚಿನ ವರದಿಗಳ ಪ್ರಕಾರ ಮಾನಸಿಕ ರೋಗದಿಂದ ಯುವ ಜನರು ಹೆಚ್ಚು ಬಾಧಿತರಾಗುವುದು ಕಂಡು ಬರುತ್ತಿದೆ. ಕೌಟುಂಬಿಕ, ಸಾಮಾಜಿಕ, ಜಾಲತಾಣಗಳಲ್ಲಿ ಹಾಗೂ ಒಡನಾಟದಿಂದಲೂ ವ್ಯಸನದ ಪ್ರಭಾವಕ್ಕೆ ಒಳಗಾಗಿ ದುಶ್ಚಟಗಳಿಗೆ ತುತ್ತಾಗುತ್ತಿದ್ದಾರೆ. 2019ರ ವರದಿ ಅನ್ವಯ 17ನೇ ವಯಸ್ಸಿಗೆ ದುಶ್ಚಟಗಳಿಗೆ ಒಳಗಾಗುತ್ತಿರುವುದು ಆತಂಕಕಾರಿ ಸಂಗತಿ ಎಂದರು.
ಮನೋ ವೈದ್ಯ ಸುಹಾಸ್ ಕೆ.ಎಲ್. ವಿಶೇಷ ಉಪನ್ಯಾಸ ನೀಡಿದರು.