ಜಿಲ್ಲೆ

ಧರ್ಮ ಪಕ್ಷಪಾತಿಗಳಾಗೋಣ: ಡಾ.ಶ್ರೀಧರ ಎನ್.ಭಟ್ಟ ಹೇಳಿಕೆ

Avinash R

ಬೆಳ್ತಂಗಡಿ: ನಾವೆಲ್ಲರೂ ಧರ್ಮ ಪಕ್ಷಪಾತಿಗಳಾಗಬೇಕು. ಶ್ರೀಕೃಷ್ಣ, ಶ್ರೀರಾಮರ ಆದರ್ಶಗಳನ್ನು ಪರಿಪಾಲಿಸಬೇಕು. ಕಾಲಘಟ್ಟಕ್ಕೆ ತಕ್ಕಂತೆ ನಾವು ಕಾರ್ಯವನ್ನು ಮಾಡುತ್ತಾ ಸದ್ಗತಿಯನ್ನು ಹೊಂದಬೇಕು ಎಂದು ಉಜಿರೆ ಎಸ್.ಡಿ.ಎಂ. ಕಾಲೇಜಿನ ಕಲಾ ನಿಕಾಯದ ಡೀನ್ ಹಾಗೂ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ.ಶ್ರೀಧರ ಎನ್.ಭಟ್ಟ ಹೇಳಿದರು.

ಶ್ರೀ ಸಿದ್ಧವನ ಗುರುಕುಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಮ್ಮ ಜನ್ಮದಿನಗಳನ್ನು ಪರರಿಗೆ ಉಪಕಾರವಾಗುವ ರೀತಿ ಆಚರಿಸಬೇಕು. ಕಲಿಕೆಯೇ ನಮ್ಮ ಮುಖ್ಯ ಉದ್ದೇಶ. ಶಿಕ್ಷಣವು ಚಾರಿತ್ರ್ಯ ನಿರ್ಮಾಣಕ್ಕಾಗಿ ಇದೆ. ಹಾಗಾಗಿ ಅಧ್ಯಯನವನ್ನು ಸರಿಯಾಗಿ ಮಾಡಬೇಕು. ಎಲ್ಲ ಪವಿತ್ರ ಗ್ರಂಥಗಳು ಪರೋಪಕಾರವನ್ನು ಸಾರುತ್ತವೆ. ಉಪಕಾರ ಪಡೆದಾತ ಮತ್ತೆ ಉಪಕಾರ ಮಾಡಿದಾಗ ಸಮಾಜ ಆತನನ್ನು ಪ್ರೀತಿಸುತ್ತದೆ. ಶ್ರೀ ಸಿದ್ಧವನ ಗುರುಕುಲ ಇದೆಲ್ಲವನ್ನು ಕಲಿಸುವ ಪಾಠಶಾಲೆ ಎಂದರು.

ಗುರುಕುಲದ ಸೌರಭ ಭಿತ್ತಿಪತ್ರಿಕೆಯ ನೂತನ ಸಂಚಿಕೆ ಅನಾವರಣಗೊಳಿಸಲಾಯಿತು. ನಿಲಯದ ಮುಖ್ಯಪಾಲಕ ಕೇಶವ ನಾಯ್ಕ, ಉಪ ನಿಲಯಪಾಲಕ ಸಚಿನ್ ಚಿಕ್ಕೋಡಿ, ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಮಹಾವೀರ ಜೈನ್ ಮತ್ತು ಕುಟುಂಬ, ಶಾಂತಿರಾಜ್ ಜೈನ್ ಉಪಸ್ಥಿತರಿದ್ದರು. ಮಾಧವ ಸ್ವಾಗತಿಸಿ, ದರ್ಶನ್ ಜೈನ್ ವಂದಿಸಿದರು. ಅಮೋಘ ಶಂಕರ ನಿರೂಪಿಸಿದರು.