ಜಿಲ್ಲೆ

ಪರಿಸರ ಉಳಿವಿಗೆ ಎಲ್ಲರೂ ಕೈಜೋಡಿಸಿ

ರುದ್ರಪ್ಪ ವಾಲಿ

ಸಿರಗುಪ್ಪ: ದೇಶದಲ್ಲಿ ಮೊಘಲ್ ಅರಸರ ಕಾಲದಲ್ಲಿ ಪಕ್ಷಿ ವೀಕ್ಷಣೆ ಒಂದು ಹವ್ಯಾಸವಾಗಿತ್ತು ಎಂದು ವಲಯ ಅರಣ್ಯ ಅಧಿಕಾರಿ ಕೌಶಿಕ್ ದಳವಾಯಿ ಹೇಳಿದರು.

ತಾಲೂಕಿನ ರಾವಿಹಾಳ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಅರಣ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಹಕ್ಕಿಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಚಕ್ರವರ್ತಿ ಜಹಂಗೀರ್ ಅಪ್ಪಟ ಪಕ್ಷಿ ಪ್ರೇಮಿಯಾಗಿದ್ದರು. ಆತನ ಆತ್ಮಕಥೆಯನ್ನು ಚಿತ್ರಸಹಿತ ಬರೆಯಲಾಗಿದೆ. ವಿವಿಧ ಬಗೆಯ ಪಕ್ಷಿಗಳು, ಅವುಗಳ ಜೀವನಕ್ರಮವನ್ನು ಅದರಲ್ಲಿ ಪ್ರಧಾನವಾಗಿ ಚಿತ್ರಿಸಲಾಗಿದೆ. ಅವನ ಆಡಳಿತಾವಧಿಯಲ್ಲಿದ್ದ ಪ್ರಸಿದ್ಧ ಚಿತ್ರಕಾರರಾದ ಉಸ್ತಾದ್ ಮನ್ಸೂರ್, ಅಬ್ದುಲ್ ಹಸನ್ ತಮ್ಮ ಕುಂಚದಲ್ಲಿ ಹಲವು ಪಕ್ಷಿಗಳನ್ನು ಚಿತ್ರಿಸಿದ್ದಾರೆ .

ಭಾರತದ ಪಕ್ಷಿಶಾಸ್ತ್ರದ ಪಿತಾಮಹ ಡಾ.ಸಲೀಂ ಅಲಿ ಬರೆದ ದಿ ಬುಕ್ ಆಫ್ ಇಂಡಿಯನ್ ಬರ್ಡ್ಸ್1941ರಲ್ಲಿ ಮುದ್ರಣ ಕಂಡಿತು. ಈ ಪುಸ್ತಕ ದೇಶದಲ್ಲಿ ಸಂಚಲನ ಸೃಷ್ಟಿಸಿತು. 1883ರಲ್ಲಿ ಸ್ಥಾಪನೆಗೊಂಡ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಕೂಡ ಪಕ್ಷಿಗಳ ವೈಜ್ಞಾನಿಕ ಅಧ್ಯಯನ, ಸಂರಕ್ಷಣೆಗೆ ವಿಶೇಷ ಒತ್ತು ಕೊಟ್ಟಿದೆ.

ಪರಿಸರ ಸಂರಕ್ಷಣೆ ನಮ್ಮ ಹೊಣೆಯಾಗಿದ್ದು ಪರಿಸರ ಉಳಿದರೆ ಮುಂದಿನ ಪೀಳಿಗೆಯವರೆಗೂ ಹಕ್ಕಿಗಳು ಉಳಿಯುತ್ತವೆ ಎಂದು ತಿಳಿಸಿದರು. ಉಪ ವಲಯ ಅರಣ್ಯ ಅಧಿಕಾರಿ ಕೊಟ್ರಪ್ಪ, ರಾಜ, ಅಂಬಣ್ಣ ನಾಯಕ್, ಬಸವನಗೌಡ, ಅರಣ್ಯ ಸಿಬ್ಬಂದಿಗಳಾದ ಮಹಾಂತೇಶ್ ಪುರಂದರ, ಹುಸೇನಪ್ಪ, ಶಾಲೆಯ ಮುಖ್ಯಗುರು ಬಿ.ಎಂ ಅಪರ್ಣ ಹಾಗೂ ಮಕ್ಕಳು ಇದ್ದರು.