ಜಿಲ್ಲೆ

ಕ್ಷಯರೋಗ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ

reportermys

ಮಡಿಕೇರಿ: ಕ್ಷಯ ರೋಗ ಹಲವು ದಶಕಗಳಿಂದ ಇದ್ದು, ಕ್ಷಯರೋಗ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಪಣ ತೊಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಸಾದ್ ಹೇಳಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾ ವಿಭಾಗ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮದ ಜಾಥಕ್ಕೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.


ಆರೋಗ್ಯ ಇದ್ದಲ್ಲಿ ಭಾಗ್ಯವಿದ್ದಂತೆ. ಆದ್ದರಿಂದ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವಂತಾಗಬೇಕು. ಕ್ಷಯ ರೋಗ ಹಲವು ದಶಕಗಳಿಂದ ಇದೆ. ಕ್ಷಯರೋಗ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಪಣ ತೊಡಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.


ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಳ್ಳಿಚಂಡ ಕಾರ್ಯಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕ್ಷಯರೋಗ ವಿಭಾಗದ ಮುಖ್ಯಸ್ಥ ರಾಮಚಂದ್ರ ಕಾಮತ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಆನಂದ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ, ಇತರರು ಇದ್ದರು.


ನಗರದ ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತ, ಅಜ್ಜಮಾಡ ದೇವಯ್ಯ ವೃತ್ತದ ಮೂಲಕ ಬಾಲಭವನ ತಲುಪಿತು. ಜಾಥದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿವಿಧ ಹಂತದ ಅಧಿಕಾರಿಗಳು. ಶ್ರುಶ್ರೂಷಕರು, ಆಶಾ ಕಾರ್ಯಕರ್ತೆಯರು ಇತರರು ಪಾಲ್ಗೊಂಡಿದ್ದರು.


ಸಭಾ ಕಾರ್ಯಕ್ರಮ: ನಗರದ ಭಾಲಭವನದಲ್ಲಿ ಆಯೋಜಿಸಿದ್ದ ಸಭಾಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ೨೦೨೫ ರೊಳಗೆ ರಾಷ್ಟ್ರದಲ್ಲಿ ಕ್ಷಯರೋಗ ನಿರ್ಮೂಲನೆಗೆ ಗಮನಹರಿಸಬೇಕಿದೆ. ದೇಶದಲ್ಲಿ ಈಗಾಗಲೇ ಪೊಲಿಯೋ ನಿರ್ಮೂಲನೆ ಆಗಿದ್ದು, ಅದರಂತೆ ಕ್ಷಯರೋಗವು ಸಹ ಇಲ್ಲದಂತೆ ಮಾಡುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.


ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಮಾತನಾಡಿ, ಕ್ಷಯರೋಗ ಶ್ವಾಸಕೋಶಗಳಲ್ಲದೇ ದೇಹದ ಎಲ್ಲಾ ಅಂಗಗಳಿಗೂ ವ್ಯಾಪಿಸುತ್ತದೆ. ಕೆಮ್ಮುವಾಗ ಮತ್ತು ಸೀನುವಾಗ ಕಡ್ಡಾಯವಾಗಿ ಕರವಸ್ತ್ರ ಬಳಸಬೇಕು ಎಂದು ಸಲಹೆ ಮಾಡಿದರು.


ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ ಮಾತನಾಡಿ, ಎರಡು ವಾರಕ್ಕಿಂತಲೂ ಹೆಚ್ಚು, ಕಫ ಬರುವುದು, ಕಫದಲ್ಲಿ ಒಮ್ಮೊಮ್ಮೆ ರಕ್ತ ಕಾಣಿಸಿಕೊಳ್ಳುವುದು. ಹಸಿವು ಮತ್ತು ತೂಕ ಕಡಿಮೆಯಗುವುದು. ಸಂಜೆಯ ಕಾಲ ಏರುವ ಜ್ವರ, ರಾತ್ರಿ ಮೈ ಬೆವರುವುದು. ಎದೆ ನೋವು ಮತ್ತು ಉಸಿರಾಡಲು ತೊಂದರೆ ಕಂಡುಬಂದಲ್ಲಿ ಹತ್ತಿತರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.


ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಬಿ.ಕೆ.ರವೀಂದ್ರ ರೈರವರನ್ನು ಸನ್ಮಾನಿಸಲಾಯಿತು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕ್ಷಯರೋಗ ವಿಭಾಗದ ಮುಖ್ಯಸ್ಥ ಡಾ.ರಾಮಚಂದ್ರ ಕಾಮತ್, ಇತರರಿದ್ದರು.

ಕೊಡಗು ಜಿಲ್ಲೆಯಲ್ಲಿ ಅರ್‌ಎನ್‌ಟಿಸಿಪಿ ಕಾರ್ಯಕ್ರಮ ೨೦೦೪ನೇ ಏಪ್ರಿಲ್-೧೫ ರಂದು ಪ್ರಾರಂಭಗೊಂಡಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ೨೦೨೨ ಡಿಸೆಂಬರ್ ಅಂತ್ಯದವರೆಗೆ ಸುಮಾರು ೭೯೯೨ ರೋಗಿಗಳನ್ನು ಚಿಕಿತ್ಸೆಗೆ ಗುರುತಿಸಿ ಚಿಕಿತ್ಸೆ ನೀಡಲಾಗಿದೆ. ಜಿಲ್ಲೆಯಲ್ಲಿ ೨೦೨೨ನೇ ಸಾಲಿನಲ್ಲಿ ಒಟ್ಟು ೧೨,೪೭೧ ಶಂಕಿತ ರೋಗಿಗಳನ್ನು ಕಫ ಪರೀಕ್ಷೆಗೆ ಒಳಪಡಿಸಿದ್ದು, ಅವುಗಳಲ್ಲಿ ಒಟ್ಟು ೪೦೦ ಕ್ಷಯರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗಿದೆ. ೨೦೨೩ನೇ ಸಾಲಿನ ಜನವರಿಯಿಂದ ಮಾ.೨೦ ರವರೆಗೆ ಒಟ್ಟು ೮೩ ಕ್ಷಯರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಾರೆ ಜಿಲ್ಲೆಯಲ್ಲಿ ೧೯೮ ಕ್ಷಯರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಡಾ.ಆನಂದ್, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿ